ಮಡಿಕೇರಿ, ಜ.28 : ಇತ್ತೀಚೆಗೆ ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳಿಗೆ ಭಾರತರತ್ನ ಪ್ರಶಸ್ತಿ ನೀಡದೆ ಉದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ಗಾಂಧಿ ಮಂಟಪದ ಎದುರು ಪ್ರತಿಭಟನೆ ನಡೆಸಿದ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನಾಲ್ಕು ಬಾರಿ ಮನವಿ ಸಲ್ಲಿಸಿ ಶ್ರೀಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಶಿಫಾರಾಸ್ಸು ಮಾಡಿದ್ದರು. ಆದರೆ ಕೇಂದ್ರ ಕುಂಟು ನೆಪಗಳನ್ನು ಹೇಳಿ ನಿರಾಕರಿಸಿದೆ.

ಸುಮಾರು 10 ಸಾವಿರ ಮಕ್ಕಳಿಗೆ ವಿದ್ಯಾದಾನ ಮಾಡುತ್ತಿರುವ ಶ್ರೀಗಳಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡದೆ ಅಗೌರವ ತೋರಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಹಿಂದೆ ಪ್ರಸಿದ್ಧ ಹಿನ್ನೆಲೆ ಗಾಯಕಿ ಲತಾಮಂಗೇಶ್ಕರ್ ಅವರಿಗೆ 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದು, ನಂತರ ಮತ್ತೆ ಅವರ ಸಾಧನೆಯನ್ನು ಗುರುತಿಸಿ 2001ರಲ್ಲಿ ಭಾರತರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಆಗ ಇಲ್ಲದ ಕಾನೂನು ತೊಡಕುಗಳು ಈಗ ಮಾತ್ರ ಯಾಕೆ ಎಂದು ಪ್ರಮುಖರು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್, ಪ್ರಧಾನ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಮೂಡ ಮಾಜಿ ಅಧ್ಯಕ್ಷರಾದ ಸುರಯ್ಯಅಬ್ರಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಫ್ಯಾನ್ಸಿ ಪಾರ್ವತಿ, ಶೈಲಾ ಕುಟ್ಟಪ್ಪ, ನಗರಸಭಾ ಸದಸ್ಯರಾದ ಜುಲೇಕಾಬಿ, ತಜಸುಂ, ಪ್ರಮುಖರಾದ ಪ್ರೇಮ ಕೃಷ್ಣಪ್ಪ, ಮಮ್ತಾಜ್ ಬೇಗಂ, ರಾಣಿ, ಹನೀಫ್, ಮಿನಾಜ್ó ಪ್ರವೀಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.