ಮಡಿಕೇರಿ, ಜ. 28: ಮಡಿಕೇರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಮೆಚ್ಚಿನ ನಿವಾಸ ರೋಶನಾರ ಬಳಿಯಲ್ಲಿನ ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವತಿಯಿಂದ ಕಾರ್ಯಪ್ಪ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.

ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಶಿಕ್ಷಣ ಸಂಸ್ಥೆಯ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 120ನೇ ಜನ್ಮದಿನಾಚರಣೆಯನ್ನು ಕಾರ್ಯಪ್ಪ ಅವರ ಸಮಾಧಿ ಸ್ಥಳವಾದ ರೋಶನಾರ ಬಳಿ ಆಚರಿಸಲಾಯಿತು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆದರು. ರಘುಪತಿ ರಾಘವ ರಾಜಾರಾಮ್ ಭಜನೆಯೂ ವಿದ್ಯಾರ್ಥಿಗಳಿಂದ ಮೊಳಗಿತು.

ಕಾರ್ಯಪ್ಪ ಸಮಾಧಿ ಸ್ಥಳಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಪುತ್ರಿ ನಳಿನಿ ಕಾರ್ಯಪ್ಪ, ಸೊಸೆ ಮೀನಾ ಕಾರ್ಯಪ್ಪ, ಸೈನಿಕಶಾಲೆಯ ಕ್ಯಾಪ್ಟನ್ ಆರ್.ಆರ್.ಲಾಲ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಉಪಪ್ರಾಂಶುಪಾಲೆ ವನಿತಾ, ವ್ಯವಸ್ಥಾಪಕ ರವಿ, ಶಿಕ್ಷಕಿಯರಾದ ಚಿತ್ರಾ ನಂಜಪ್ಪ, ವೀಣಾ ಹೊಳ್ಳ, ಶಿಲ್ಪಪೆÇನ್ನಮ್ಮ, ಇಂದಿರಾ ಆಡಳಿತ ಮಂಡಳಿ ಸದಸ್ಯರಾದ ಗುರುದತ್, ಶಾರದಾ ಮಂದಪ್ಪ ಸೇರಿದಂತೆ ಪ್ರಮುಖರು ಪುಪ್ಪಾರ್ಚನೆ ಮೂಲಕ ಕಾರ್ಯಪ್ಪ ಅವರಿಗೆ ಗೌರವ ನಮನ ಸಲ್ಲಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತಾಗಿನ ಪ್ರಬಂಧ ಸ್ಪರ್ಧೆಯಲ್ಲಿ ಕೂಡಿಗೆ ಸೈನಿಕ ಶಾಲೆಯ ಕೆಡೆಟ್ ಕೆ.ಕೆ. ದೇವಯ್ಯ ಪ್ರಥಮ ಸ್ಥಾನ ಪಡೆದು ಕಾರ್ಯಪ್ಪ ಸ್ಮಾರಕ ಟ್ರೋಫಿಯನ್ನು ಸೈನಿಕ ಶಾಲೆ ಪಡೆಯಲು ಕಾರಣರಾದರು. ದ್ವಿತೀಯ ಬಹುಮಾನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಶಾಲೆಯ ನಿಮಿತಾ ಮೇದಪ್ಪ ಮತ್ತು ತೃತೀಯ ಬಹುಮಾನ ಪಿ. ಆರ್ಯ ರಾಜೇಶ್ ಅವರಿಗೆ ದೊರಕಿತು. ಕಾರ್ಯಪ್ಪ ಪುತ್ರಿ ನಳಿನಿ ಕಾರ್ಯಪ, ಸೊಸೆ ಮೀನಾ ಕಾರ್ಯಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು.