ಮಡಿಕೇರಿ, ಜ. 29: ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಸ್ಪಿಕ್ ಮೆಕೆ ವತಿಯಿಂದ ಫೆ. 1 ರಂದು ಮಡಿಕೇರಿಯಲ್ಲಿ ನೃತ್ಯಕಲಾವಿದೆ ಸರಿತಾ ಮಿಶ್ರ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ.
ಫೆ. 1 ರಂದು ಸಂಜೆ 6.30 ಗಂಟೆಗೆ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಬಳಿಯಲ್ಲಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಒಡಿಸ್ಸಿ ನೃತ್ಯ ಜರುಗಲಿದೆ.
ತನ್ನ 4 ನೇ ವಯಸ್ಸಿನಲ್ಲಿಯೇ ಒಡಿಸ್ಸಿ ನೃತ್ಯದಲ್ಲಿ ಆಸಕ್ತಿ ತಳೆದ ಸರಿತಾ ಮಿಶ್ರ ನಿರಂಜನ್ ರಾವತ್ ಅವರಿಂದ ನೃತ್ಯ ಕಲಿತರು. 1993ರಲ್ಲಿ ಗಂಧರ್ವ ಮಹಾವಿದ್ಯಾಲಯ ದಿಂದ ಸಂಗೀತ ಶಿಕ್ಷಣ ಪಡೆದರು. ಸೇನಾಧಿಕಾರಿಯನ್ನು ವಿವಾಹವಾದ ಸರಿತಾ ಮಿಶ್ರ, ಹಲವಾರು ಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಲ್ಲದೇ ಅತ್ಯುತ್ತಮ ಶಿಕ್ಷಕಿ ಎಂಬ ಬಿರುದು ಪಡೆದರು. ಸಂಗೀತ, ನೃತ್ಯಕಲೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಸರಿತಾ ಮಿಶ್ರ ಅಪಾರವಾದ ಸಾಧನೆ ಮಾಡಲು ಈಕೆಯಲ್ಲಿನ ಹುಮ್ಮಸ್ಸು ನೆರವಾಯಿತು.
ದೇಶವಿದೇಶಗಳಲ್ಲಿ ಒಡಿಸ್ಸಿ ನೃತ್ಯ ಪ್ರದರ್ಶನದೊಂದಿಗೆ ಹೆಸರುವಾಸಿಯಾಗಿರುವ ಸರಿತಾ ಮಿಶ್ರರ ಅಪೂರ್ವ ನೃತ್ಯ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶವಿದ್ದು, ಕಲಾಪ್ರೇಮಿ ಗಳು ಈ ಅವಕಾಶ ಸದುಪಯೋಗಪಡಿಸಿ ಕೊಳ್ಳುವಂತೆ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಪ್ರಕಟಣೆಯಲ್ಲಿ ಕೋರಿದ್ದಾರೆ.