ಸೋಮವಾರಪೇಟೆ,ಜ.29 : ಮಹಾಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ಥರಾದವರಿಗೆ ಅಗತ್ಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸ್‍ವಾದಿ ಲೆನಿನ್ ವಾದಿ) ರೆಡ್ ಸ್ಟಾರ್ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರಾಕೃತಿಕ ವಿಕೋಪದಿಂದ ಸಂತ್ರಸ್ಥರಾದವರಿಗೆ ಸರ್ಕಾರದಿಂದ ಈವರೆಗೆ ಸಮರ್ಪಕ ಪರಿಹಾರ ಲಭಿಸಿಲ್ಲ. ಬಡ ಕಾರ್ಮಿಕರು, ಸಣ್ಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರೂ ಸೂಕ್ತ ಸ್ಪಂದನೆಯಿಲ್ಲ. ಹೊರ ಭಾಗದಿಂದ ಹರಿದು ಬಂದ ಪರಿಹಾರ ಸಾಮಗ್ರಿಗಳೂ ಸಹ ನಿಜವಾದ ಫಲಾನುಭವಿಗಳಿಗೆ ತಲಪಿಲ್ಲ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ನಿರ್ವಾಣಪ್ಪ ಆರೋಪಿಸಿದರು.

ಭೂ ಮಾಲೀಕರು ಸ್ಥಳೀಯ ಕಾರ್ಮಿಕರಿಗೆ ಕೂಲಿ ನೀಡದೇ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತರುತ್ತಿದ್ದು, ಕೆಲಸವಿಲ್ಲದೆ ಕಾರ್ಮಿಕರ ಬದುಕು ಶೋಚನೀಯ ಸ್ಥಿತಿಗೆ ತಲಪಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಉಳಿದಿರುವ ಆಹಾರ ಸಾಮಗ್ರಿಗಳನ್ನು ಕಡುಬಡವರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಪ್ರಾಕೃತಿಕ ವಿಕೋಪದಿಂದ ಕೃಷಿ ಭೂಮಿ, ಮನೆ ಕಳೆದುಕೊಂಡವರಿಗೆ ನಿವೇಶನ ಮತ್ತು ಸಾಗುವಳಿ ಭೂಮಿ ನೀಡಬೇಕು. ಉಳಿಕೆಯಾಗಿರುವ ಆಹಾರ ಪದಾರ್ಥಗಳನ್ನು ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸಬೇಕು. ಆದಿವಾಸಿಗಳು ಮತ್ತು ನಿವೇಶನ ರಹಿತರಿಗೆ ಗುರುತಿಸಿರುವ ಭೂಮಿಯನ್ನು ತಕ್ಷಣ ವಿತರಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ಪಡೆಯುವ ಕ್ರಮವನ್ನು ತಕ್ಷಣ ರದ್ದುಗೊಳಿಸಬೇಕು. ರಾಜ್ಯದಲ್ಲಿ ಮದ್ಯಪಾನವನ್ನು ಸಂಪೂರ್ಣ ನಿಷೇಧ ಮಾಡಬೇಕು. ಫಾರಂ 57ರಡಿ ತಕ್ಷಣ ಅರ್ಜಿ ಸ್ವೀಕರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮನವಿಯನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಆರ್. ಮಂಜುನಾಥ್, ಪದಾಧಿಕಾರಿಗಳಾದ ಹೆಚ್.ಈ. ಸಣ್ಣಪ್ಪ, ಅನಿತಾ, ಪವಿತ್ರ, ಸಾವಿತ್ರಮ್ಮ, ಎಂ.ಎಂ. ಸಿದ್ದಯ್ಯ, ಜಯಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.