*ಗೋಣಿಕೊಪ್ಪಲು, ಜ. 28: ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಜೆ. ಸೋಮಣ್ಣ ಅವರನ್ನು ಸನ್ಮಾನಿಸ ಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಹೇಳಿದರು.

ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಈಚೆಗೆ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಸೋಮಣ್ಣ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಇಲಾಖೆ ಆಯೋಜಿಸುವ ಮಹಾತ್ಮರ ಜಯಂತಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಗಳಿಗೆ ಸೋಮಣ್ಣ ಅವರ ಕೊಡುಗೆ ಅಮೂಲ್ಯವಾದುದಾಗಿದೆ. 28 ವರ್ಷ ಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವದರ ಜತೆಗೆ ಉತ್ತಮ ಸಾಹಿತಿಯೂ ಆಗಿದ್ದು ಹತ್ತಾರು ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಗಿರಿಜನರ ಜನಪದ ಉತ್ಸವ, ಸಂಗೀತ, ವಿಚಾರಗೋಷ್ಠಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೆಲ್ಲ ಗಮನಿಸಿ ಅವರನ್ನು ಸಾಧಕರ ಸನ್ಮಾನ ಯೋಜನೆಯಲ್ಲಿ ಸನ್ಮಾನಿಸ ಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಾಯಿಶಂಕರ ವಿದ್ಯಾಸಂಸ್ಥೆ ಅಧ್ಯಕ್ಷ ಕೋಳೆರ ಝರು ಗಣಪತಿ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕøತಿ ಮನುಷ್ಯನನ್ನು ಉನ್ನತ ಹಂತಕ್ಕೆ ಕೊಂಡೊಯ್ಯಲಿವೆ. ಬಹುಮುಖ ಪ್ರತಿಭೆಯನ್ನು ಹೊಂದಿರುವ ಸೋಮಣ್ಣನವರ ಸಾಧನೆ ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮಣ್ಣ ತಿಳಿದ ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಪ್ರಾಮಾಣಿಕ ವಾಗಿ ಹಂಚಿಕೊಳ್ಳುವ ಕೆಲಸ ಸಂತಸ ತಂದಿದೆ. ಇದರ ಜತೆಗೆ ಬೋಧನೆಗೆ ಪೂರಕವಾಗಿರುವ ಸಾಹಿತ್ಯ ಮತ್ತು ಸಾಂಸ್ಕøತಿಕ ಚಟುವಟಿಕೆಗಳೂ ಅಪ್ಯಾಯಮಾನ ವಾದುದಾಗಿದೆ. ಈ ಕ್ಷೇತ್ರಗಳಲ್ಲಿ ಒಂದಷ್ಟು ಕೆಲಸಮಾಡಲು ಪ್ರೇರಣೆ ನೀಡುತ್ತಾ ಬಂದಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಆಭಾರಿಯಾಗಿದ್ದೇನೆ ಎಂದರು. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಈರಪ್ಪ, ಕುಶಾಲನಗರದ ಮೋಹನ್ ಕುಮಾರ್, ಪೊನ್ನಂಪೇಟೆ ಜೈಭೀಮ್ ಯುವಕ ಸಂಘದ ಕಲಾವಿದ ಗಿರೀಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವ್ಯವಸ್ಥಾಪಕ ಮಂಜುನಾಥ್ ಮಣಜೂರು, ಗಿಡ್ಡಪ್ಪ ಹಾಜರಿದ್ದರು.