ಸೋಮವಾರಪೇಟೆ, ಜ. 27: ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಮಡಿಕೇರಿ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ ಮತ್ತು ವಕೀಲರ ಸಂಘದ ವತಿಯಿಂದ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ನಡೆಯಿತು.

ಸೋಮವಾರಪೇಟೆ ಜೆ.ಎಂ.ಎಫ್.ಸಿ.ಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ದೊಡ್ಡಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮತದಾನ ಪವಿತ್ರವಾದ ಹಕ್ಕು. ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಪ್ರಜ್ಞಾವಂತ ಮತದಾರರಿಂದ ಮಾತ್ರ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಸಾಧ್ಯ. ಮತದಾರರು ಉತ್ಸಾಹದಿಂದ ಮತದಾನ ಮಾಡಿದರೆ ಶೇಕಡಾವಾರು ಮತದಾನದಲ್ಲಿ ಹೆಚ್ಚಳವಾಗಿ ಉತ್ತಮ ಜನಪ್ರತಿನಿಧಿಗಳು ಆಯ್ಕೆಯಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರುಗಳಾದ ಭರತ್, ಮಲ್ಲಿಕಾರ್ಜುನ, ತಹಸೀಲ್ದಾರ್ ಪಿ.ಎಸ್.ಮಹೇಶ್, ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ತಿಮ್ಮಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಿ.ಕೆ.ಬಿನಯ್, ಬಿಇಒ ನಾಗರಾಜಯ್ಯ ಉಪಸ್ಥಿತರಿದ್ದರು.