ಮಡಿಕೇರಿ, ಜ. 27: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನ ಪ್ರದೇಶದಲ್ಲಿ 1957 ರಲ್ಲಿ ಕಾಣಿಸಿಕೊಂಡಿದ್ದರಿಂದಾಗಿ ಊರಿನ ಹೆಸರಿನಿಂದ ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಎಂದು ಹೆಸರು ಬಂದಿದೆ.
ರೋಗ ಹರಡುವ ವಿಧಾನ: ಮಂಗನ ಕಾಯಿಲೆಗೆ ಕಾರಣ ವೈರಾಣುಗಳು (ಪ್ಲೆವಿ ವೈರಸ್) ಇದು ಕಾಡಿನಲ್ಲಿರುವ ವೈರಾಣು ಹೊಂದಿದ್ದ ಉಣ್ಣೆಗಳು ಕಚ್ಚುವದರಿಂದ ಬರುತ್ತದೆ. ಈ ಕಾಯಿಲೆಯು ಮನುಷ್ಯರಿಂದ ಮನುಷ್ಯರಿಗೆ ಹರಡುವದಿಲ್ಲ. ಕಾಡಿನಲ್ಲಿ ಸತ್ತ ಮಂಗಗಳು ಕಾಣುವದೇ ಈ ಕಾಯಿಲೆಯ ಮುನ್ಸೂಚನೆ.
ಮುಖ್ಯ ಲಕ್ಷಣಗಳು: ಸತತ ಎಂಟು-ಹತ್ತು ದಿನಗಳವರೆಗೆ ಬಿಡದೇ ಬರುವ ಜ್ವರ. ವಿಪರೀತ ತಲೆ ನೋವು, ಸೊಂಟ ನೋವು, ಕೈ ಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವದು. ಜ್ವರ ಬಂದ 2 ವಾರದ ನಂತರ ಸನ್ನಿಪಾತ ಮೆದುಳಿನ, ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವವಾಗಬಹುದು.
ಮುಂಜಾಗ್ರತ ಕ್ರಮಗಳು: ಮಂಗಗಳು ಸತ್ತ ಬಗ್ಗೆ ಗ್ರಾಮಸ್ಥರು/ ಸಾರ್ವಜನಿಕರು ಹತ್ತಿರದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಯವರಿಗೆ ಇಲ್ಲವೇ ಸಿಬ್ಬಂದಿಯವರಿಗೆ/ ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ಮನವಿ ಮಾಡುವದು.
ಮಂಗ ಸತ್ತ ಹಾಗೂ ಸುತ್ತ ಮುತ್ತಲಿನ 5 ಕಿಮೀ ಪರಿಧಿಯಲ್ಲಿ ಅನಿವಾರ್ಯ ಕಾರಣದ ಹೊರತು ಜನ ಜಾನುವಾರುಗಳ ಪ್ರವೇಶವನ್ನು ನಿರ್ಬಂಧಿಸಬೇಕು. ಹೋಗಲೇ ಬೇಕಾದಲ್ಲಿ ಮೈ ಪೂರ್ತಿ ಮುಚ್ಚುವ ಉಡುಗೆ ತೊಟ್ಟು ಇಲಾಖೆಯಿಂದ ಉಚಿತವಾಗಿ ವಿತರಿಸುವ ರೋಗವಾಹಕ ಉಣ್ಣೆಗಳ ವಿಕರ್ಷಕ ಡಿಎಂಪಿ ತೈಲದ ಲೇಪನವನ್ನು ಕೈಕಾಲಿಗೆ ಲೇಪಿಸಿ ಹೋಗಬೇಕು. ಕಾಡಿನಿಂದ ಬಂದ ನಂತರ ಬಟ್ಟೆಗಳನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ ಸೋಪು ಹಚ್ಚಿ ಸ್ನಾನ ಮಾಡಲೇಬೇಕು.
ಸತ್ತ ಮಂಗನ ಮರಣೋತ್ತರ ಪರೀಕ್ಷೆ ಮಾಡಿಸಿ ದೇಹದ ಭಾಗಗಳನ್ನು (ಮೆದುಳು, ಪಿತ್ತಜನಕಾಂಗ, ಶ್ವಾಸಕೋಶ, ಕಿಡ್ನಿ, ಹೃದಯ, ಗುಲ್ಮ) ಪ್ರತ್ಯೇಕವಾಗಿ ತೆಗೆದು ಶುದ್ಧೀಕರಿಸಿದ ಪ್ಲಾಸ್ಟಿಕ್ ಸ್ಕ್ರೂ ಕ್ಯಾಪ್ ಟೆಸ್ಟ್ ಟ್ಯೂಬ್ ನಲ್ಲಿ ಸಂಗ್ರಹಿಸಿ (ಯಾವದೇ ಪ್ರಿಸರ್‍ವೇಟಿವ್ ಇಲ್ಲದೆ) ವಿವರಗಳನ್ನು ಅಂಟಿಸಿ ಹೆಚ್ಚಿನ ಪರೀಕ್ಷೆಗಾಗಿ ಶೀತಲ ಸರಪಣಿಯಲ್ಲಿ ವಿಡಿಎಲ್. ಶಿವಮೊಗ್ಗಕ್ಕೆ ಕಳುಹಿಸುವದು. ಮಂಗ ಸತ್ತ ಸುತ್ತ-ಮುತ್ತಲು ಉಣ್ಣೆ ಸಂಗ್ರಹ ಮಾಡುವದು. ಸತ್ತ ಮಂಗನ ಅವಶೇಷಗಳನ್ನು ಸುಡುವದು ಹಾಗೂ 50 ಮೀಟರ್ ಪರಿಧಿಯಲ್ಲಿ ಶೇ.25 ಮೆಲಾಥಿಯನ್ ಪುಡಿಯ ಮಿಶ್ರಣ ಧೂಳೀಕರಿಸುವದು.
ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ದೈನಂದಿನ ಮನೆ ಭೇಟಿ ಸಂದÀರ್ಭದಲ್ಲಿ ಶಂಕಿತ ಜ್ವರ ಪ್ರಕರಣಗಳ ಮಾಹಿತಿ ಪಡೆದು ತಕ್ಷಣ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ, ಸೂಕ್ತ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡುವದು.
ಶಂಕಿತ ರೋಗಿಗಳಿಂದ ಜ್ವರ ಕಾಣಿಸಿಕೊಂಡ 3 ರಿಂದ 10 ನೇ ದಿವಸದೊಳಗೆ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಸೀರಂನ್ನು ಬೇರ್ಪಡಿಸಿ +4 ಸೆಂಟಿಗ್ರೇಡ್ ಶೀತಲ ಸರಪಣಿಯಲ್ಲಿ ಪ್ರಯೋಗಶಾಲೆಗೆ ಮಾಹಿತಿಗಳೊಡನೆ ಕಳುಹಿಸುವದು. ಈ ಸಮಯದಲ್ಲಿ ಪಶು ಸಂಗೋಪನಾ ಇಲಾಖೆ, ಅರಣ್ಯ ಇಲಾಖೆ, ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುವದು. ಭಾಧಿತ/ ಶಂಕಿತ ಪ್ರದೇಶದ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಮಾಹಿತಿಯನ್ನೊಳಗೊಂಡ ಭಿತ್ತಿ ಪತ್ರಗಳನ್ನು ವಿತರಿಸುವದು. ಸಾರ್ವಜನಿಕ ಪ್ರದೇಶಗಳಲ್ಲಿ ಮಂಗನ ಕಾಯಿಲೆ ರೋಗ ಲಕ್ಷಣ, ಹರಡುವಿಕೆ, ಮುಂಜಾಗ್ರತಾ ಕ್ರಮದ ವಿವರವನ್ನು ಗೋಡೆ ಬರಹಗಳ ಮುಖಾಂತರ ಪ್ರಚುರಪಡಿಸುವದು. ಸಕ್ರಿಯವಾಗಿ ಜನರಿಗೆ ಆರೋಗ್ಯ ಶಿಕ್ಷಣ ಮತ್ತು ಮಾಹಿತಿ ನೀಡಲು ಮುಂದಾಗುವದು.
ಚುಚ್ಚುಮದ್ದು: ಮಂಗನ ಕಾಯಿಲೆಗೆ ಲಸಿಕೆ ಲಭ್ಯವಿರುತ್ತದೆ. ಈ ಲಸಿಕೆಯಿಂದ ಯಾವದೇ ದುಷ್ವರಿಣಾಮಗಳು ಇರುವದಿಲ್ಲ. ಈ ಲಸಿಕೆಯನ್ನು ಆರೋಗ್ಯವಂತನಾದ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಮೊದಲ ವರಸೆ ಮತ್ತು ಒಂದು ತಿಂಗಳ ಅಂತರದಲ್ಲಿ ಎರಡನೇ ವರಸೆಯ ಲಸಿಕೆ ಪಡೆಯುವದು. ಪ್ರತಿ ವರ್ಷ ವರ್ಧಕ ಲಸಿಕೆ ಹಾಕಿಸಿಕೊಳ್ಳಬೇಕು.