ಸೋಮವಾರಪೇಟೆ, ಜ. 27: ವೀರತ್ವ, ಪೌರುಷಕ್ಕೆ ಹೆಸರುವಾಸಿಯಾಗಿರುವ ಕೊಡಗಿನ ಮಣ್ಣಿನಲ್ಲಿ ಇತ್ತೀಚಿನ ದಿನಗಳಲ್ಲಿ, ಹೊರಭಾಗದಿಂದ ಆಗಮಿಸುವ ಸಮಾಜದ್ರೋಹಿಗಳಿಂದ ವಿದ್ರೋಹಿ ಚಟುವಟಿಕೆಗಳು ನಡೆಯುತ್ತಿವೆ. ಇವುಗಳನ್ನು ಕೊಡಗಿನ ಜನರು ಅತೀ ಸೂಕ್ಷ್ಮ ಕಣ್ಣುಗಳಿಂದ ಗಮನಿಸಬೇಕು ಎಂದು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖಾ ರಾಜ್ಯ ಸಚಿವ ಅನಂತ್‍ಕುಮಾರ್ ಹೆಗಡೆ ಕರೆ ನೀಡಿದರು.ಹಿಂದೂ ಜಾಗರಣಾ ವೇದಿಕೆ ಮತ್ತು ಬೆಂಗಳೂರಿನ ಪರಿವರ್ತನ ಟ್ರಸ್ಟ್ ವತಿಯಿಂದ ಮಾದಾಪುರದ ಎಸ್‍ಜೆಎಂ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ಐಕ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇರಳದ ಶಬರಿಮಲೆಗೆ ಪ್ರವೇಶ ಮಾಡಿದ ಮಹಿಳೆಯರು ಕೊಡಗಿನಲ್ಲಿ ನೆಲೆಸಿದ್ದರು. ಸರಣಿ ಬಾಂಬ್ ಸ್ಪೋಟದ ಆರೋಪಿಗಳೂ ಇಲ್ಲೇ ಇದ್ದರು. ಈ ಹಿಂದೆ ವೀರತ್ವಕ್ಕೆ ಹೆಸರುವಾಸಿಯಾಗಿದ್ದ ಪ್ರಶಾಂತ ಕೊಡಗಿನಲ್ಲಿ ಇಂದು ದೇಶದ್ರೋಹದ ಚಟುವಟಿಕೆಗಳು ನಡೆಯುತ್ತಿವೆ. ಇಂತಹವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದ ಅನಂತ್‍ಕುಮಾರ್ ಹೆಗಡೆ, ಕೊಡಗಿನ ವೈನ್, ಕಾಫಿ ಇಲ್ಲಿನ ಗುರುತಲ್ಲ, ಬದಲಿಗೆ ವೀರತ್ವ ಎಂಬದನ್ನು ಮನಗಾಣಬೇಕು ಎಂದರು.
ಇಲ್ಲಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರು ಯಾರು ಎಂಬದೇ ಮಾಲೀಕರುಗಳಿಗೆ ಗೊತ್ತಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಲ್ಲಿ ಪ್ರಾರ್ಥನಾಲಯಗಳು ಏಳುತ್ತಿವೆ. ಮಾಲೀಕರಿಗೂ ಗೊತ್ತಾಗದ ಚಟುವಟಿಕೆಗಳು ಕಾಫಿ ತೋಟಗಳಲ್ಲಿ ನಡೆಯುತ್ತಿದ್ದು, ಇಂದು ಕೊಡಗು ಜ್ವಾಲಾಮುಖಿಯ ಮೇಲೆ ನಿಂತಿದೆ ಎಂದ ಅವರು, ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಕೊಡಗು ಕೊಡಗಾಗಿ ಉಳಿಯುವದಿಲ್ಲ. ಈ ಹಿನ್ನೆಲೆ ಕೊಡಗು ತನ್ನ ಮೂಲ ಸ್ವಭಾವದೊಂದಿಗೆ ಎದ್ದು ನಿಲ್ಲಬೇಕು ಎಂದು ಅಭಿಪ್ರಾಯಿಸಿದರು.
ಕೇರಳದಲ್ಲಿ ಶಬರಿಮಲೆಯ ಪಾವಿತ್ರ್ಯತೆಯನ್ನು ಹಾಳುಗೆಡವಲು ಸರ್ಕಾರವೇ ಮುಂದೆ ನಿಂತಿದೆ. ದೇವಾಲಯಗಳನ್ನು ನಾಶ ಮಾಡುವ ಹುನ್ನಾರ ಕಮ್ಯುನಿಸ್ಟ್ ಸರ್ಕಾರದ್ದಾಗಿದ್ದು, ಸಮಾನತೆ, ಕ್ರಾಂತಿಯ ಹೆಸರಿನಲ್ಲಿ ಸಮಾಜದ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ ಎಂದ ಅವರು, ಸಮಾಜ ವಿದ್ರೋಹಿ ಶಕ್ತಿಗಳನ್ನು ಮಟ್ಟಹಾಕಲು ರಾಷ್ಟ್ರೀಯತೆಯ ಶಕ್ತಿ ಬಲಗೊಳ್ಳಬೇಕು ಎಂದರು.
(ಮೊದಲ ಪುಟದಿಂದ)
ದೇಶದಲ್ಲಿ ಹಿಂದೂ ಸಮಾಜದ ಮೇಲೆ ಅಸಂಖ್ಯಾತ ಧಾಳಿಗಳಾಗಿವೆ. ಇಲ್ಲಿನ ದೇವಾಲಯಗಳನ್ನು ಒಡೆದು ಅರೆಬಿಕ್ ಲಿಪಿಯಲ್ಲಿ ಹೆಸರು ಬದಲಾಯಿಸಲಾಗಿದೆ. ಸ್ವಾತಂತ್ರ್ಯಾ ನಂತರ ಆಳ್ವಿಕೆ ಮಾಡಿದ ಸರ್ಕಾರವೂ ಸಹ ಸುಳ್ಳು ಇತಿಹಾಸವನ್ನೇ ಹೇಳಿಕೊಂಡು ಬಂದಿದೆ. ಇದಕ್ಕೆ ತೇಜೋಮಹಲ್ ಆಗಿದ್ದ ದೇವಾಲಯ ತಾಜ್‍ಮಹಲ್, 24 ನಕ್ಷತ್ರಗಳ ದೇವಾಲಯವಾಗಿದ್ದ ಜೈನ ಮಂದಿರ ಕುತುಬ್‍ಮಿನಾರ್ ಆಗಿರುವದೇ ಸಾಕ್ಷಿ ಎಂದು ಹೇಳಿದರು.
ಸಮಾಜದಲ್ಲಿ ಜಾಗೃತಿಯತ್ತ ಆರ್‍ಎಸ್‍ಎಸ್, ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆಗಳು ಕಾರ್ಯಪ್ರವೃತ್ತವಾಗಿವೆ ಎಂದರು.
ಹಿಂದೂ ಸಮಾಜದ ಹೆಣ್ಣು ಮಕ್ಕಳ ರಕ್ಷಣೆಯಾಗಬೇಕು. ಇತಿಹಾಸವನ್ನು ಪೌರುಷದಿಂದ ಮಾತ್ರ ಬರೆಯಲು ಸಾಧ್ಯ; ಪುಕ್ಕಲುತನದಿಂದ ಅಲ್ಲ ಎಂದು ಅನಂತ್‍ಕುಮಾರ್ ಹೇಳಿದರು.
ದೇವಾಲಯ ಕೇವಲ ಕಟ್ಟಡವಲ್ಲ; ಅದು ಭಾವನೆಗಳ ಮಂದಿರ. ಕಲ್ಲು ಮಣ್ಣಿನಲ್ಲಿ ದೇವರಿಲ್ಲ-ಒಳ್ಳೆಯ ಭಾವನೆಗಳಲ್ಲಿ ಮಾತ್ರ ದೇವರಿದ್ದಾನೆ. ಅಂತಹ ದೇವಾಲಯವನ್ನು ಮಾದಾಪುರದ ಕಲ್ಲುಕೋರೆಯಲ್ಲಿ ನಿರ್ಮಿಸಲಾಗಿದ್ದು, ಯಾವದೇ ಜಾತಿಗೆ ಇದು ಸೀಮಿತವಾಗಿಲ್ಲ. ಕೊಡಗಿನ ಪ್ರವಾಹ ಸಂದರ್ಭದಲ್ಲಿ ಹಲವಷ್ಟು ಮಂದಿ ಸಂತ್ರಸ್ಥರಾಗಿದ್ದು, ಜಾಗರಣಾ ವೇದಿಕೆಯಿಂದ ಸಾಕಷ್ಟು ನೆರವು ಒದಗಿಸಲಾಗಿದೆ. ದೇವಾಲಯಗಳ ನಿರ್ಮಾಣ ಕಾರ್ಯ ನಡೆದಿದೆ. ಮುಂದೆಯೂ ಸಂತ್ರಸ್ಥರೊಂದೊಗೆ ವೇದಿಕೆ ನಿಲ್ಲಲಿದೆ ಎಂದು ಅನಂತ್‍ಕುಮಾರ್ ಹೆಗಡೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸೋಮವಾರಪೇಟೆ ವಿರಕ್ತ ಮಠಾಧೀಶರಾದ ಶ್ರೀ ವೀಶ್ವೇಶ್ವರ ಸ್ವಾಮೀಜಿ ಮಾತನಾಡಿ, ದೇವಾಲಯ ಗಳು ಮಾನಸಿಕ ನೆಮ್ಮದಿಯ ತಾಣಗಳಾಗಿವೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಧರ್ಮ ಜಾಗೃತಿಯೊಂದಿಗೆ ರಕ್ಷಣೆಯ ಕಾರ್ಯದಲ್ಲಿ ಜಾಗರಣಾ ವೇದಿಕೆ ತೊಡಗಿಸಿಕೊಂಡಿರುವದು ಶ್ಲಾಘನೀಯ ಎಂದರು.
ಕೇರಳ ಹಿಂದೂ ಐಕ್ಯವೇದಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ. ಬ್ರಹ್ಮಚಾರಿ ಭಾರ್ಗವರಾವ್ ಮಾತನಾಡಿ, ಹಿಂದೂಗಳು ಐಕ್ಯತೆಯಿಂದಿರಬೇಕು. ಹಿಂದೂ ಧರ್ಮದಲ್ಲಿ ಜಾತಿ ಮತ್ತು ರಾಷ್ಟ್ರೀಯವಾದದ ವಿಘಟನೆಯಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಜಾತಿಯ ಮಾನಸಿಕತೆಯಿಂದ ಹೊರಬರಬೇಕು ಎಂದರು.
ಕೇರಳದ ಶಬರಿಮಲೆ ವಿಚಾರದಲ್ಲಿ 154 ಸಂಘಟನೆಗಳನ್ನು ಹಿಂದೂ ಐಕ್ಯವೇದಿ ಒಂದೆಡೆ ಸಂಘಟಿಸಿದೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಶರಣಘೋಷದೊಂದಿಗೆ ಹಿಂದೂ ಸಮಾಜ ಒಂದಾಗಿದೆ ಎಂದ ಅವರು, ಕರ್ನಾಟಕದಲ್ಲಿರುವ ಅರ್ಬನ್ ನಕ್ಸಲ್, ಜಿಹಾದಿ ಶಕ್ತಿಗಳ ಬಗ್ಗೆ ಹಿಂದೂ ಸಮಾಜ ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರಾದ ಎಂ.ಬಿ. ಮಧು ಬೋಪಣ್ಣ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ಪರಿವರ್ತನ ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಚಂಗಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ಧರ್ಮಪ್ಪ, ಆರ್‍ಎಸ್‍ಎಸ್ ಜಿಲ್ಲಾ ಸಂಘಚಾಲಕ್ ಚಕ್ಕೇರ ಮನು ಕಾವೇರಪ್ಪ, ಮಾದಾಪುರ ಕೊಡವ ಸಮಾಜದ ಸ್ಥಾಪಕಾಧ್ಯಕ್ಷ ಎಂ.ಎ. ಪೊನ್ನಪ್ಪ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ಲತೆ ಸೋಮಣ್ಣ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಸವಿತಾ ಸಮಾಜದ ಅಧ್ಯಕ್ಷ ವೆಂಕಟೇಶ್, ಮೊಗೇರ ಸಮಾಜದ ಅಧ್ಯಕ್ಷ ಶಿವಪ್ಪ, ಹಿಂದೂ ಮಲೆಯಾಳಿ ಸಮಾಜದ ಉಪಾಧ್ಯಕ್ಷ ಅಜೀಶ್ ಕುಮಾರ್, ಬೋವಿ ಸಮಾಜದ ಅಧ್ಯಕ್ಷ ಸುಜಿತ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವದಾಸ್, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜನಾರ್ಧನ್, ಜಾಗರಣಾ ವೇದಿಕೆಯ ಅಧ್ಯಕ್ಷ ಅಯ್ಯಣ್ಣ, ದೇವಾಲಯ ಸಮಿತಿ ಅಧ್ಯಕ್ಷ ಪ್ರಭಾಕರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ್, ಪ್ರಮುಖರಾದ ಲಾಲ ಅಯ್ಯಣ್ಣ, ಬಾಲಕೃಷ್ಣ ಪೈ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಿಂದೂ ಜಾಗರಣಾ ವೇದಿಕೆಯ ಕೆ.ಟಿ. ಉಲ್ಲಾಸ್ ಪ್ರಾಸ್ತಾವಿಕ ನುಡಿಯಾಡಿದರೆ, ಲಕ್ಷ್ಮೀ ಪ್ರಾರ್ಥಿಸಿ, ಪದ್ಮನಾಭ್ ಸ್ವಾಗತಿಸಿ, ಸುನಿಲ್ ವಂದಿಸಿದರು. ಕುಕ್ಕೇರ ಅಜಿತ್ ಕಾರ್ಯಕ್ರಮ ನಿರೂಪಿಸಿದರು.