ಮಡಿಕೇರಿ, ಜ. 27: ಮಡಿಕೇರಿ ರೋಟರಿ ಸಂಸ್ಥೆ ವತಿಯಿಂದ ಫೆ. 1 ರಂದು ಪೊಲೀಸ್ ಅಧಿಕಾರಿಗಳ ಕುಟುಂಬ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಟರಿ ಅಧ್ಯಕ್ಷ ಮೇಜರ್ ಒ.ಎಸ್. ಚಿಂಗಪ್ಪ, ಮಡಿಕೇರಿ ರೋಟರಿ ಸಭಾಂಗಣದಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಸುಮಾರು 350 ಮಂದಿ ಗೃಹರಕ್ಷಕ ದಳದ ಸಿಬ್ಬಂದಿಗಳಿದ್ದು, ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳು ಶಿಬಿರದ ಲಾಭ ಪಡೆದುಕೊಳ್ಳಬಹುದೆಂದರು.
ರೋಟರಿಯನ್ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ರೋಟರಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಪೊಲೀಸರ ಕುಟುಂಬ ವರ್ಗ ಹಾಗೂ ಗೃಹರಕ್ಷಕ ದಳದವರಿಗೆ ಆದ್ಯತೆ ನೀಡಲಾಗಿದೆ ಎಂದರು. ಶಿಬಿರದಲ್ಲಿ ಉಚಿತ ತಪಾಸಣೆ ನಡೆಸಿದ ನಂತರ ಹೆಚ್ಚಿನ ಚಿಕಿತ್ಸೆಯ ಆಗತ್ಯವಿದ್ದಲ್ಲಿ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವದೆಂದರು. ಡಯಾಬಿಟಿಕ್ ಕಾಯಿಲೆ ದೇಶವನ್ನು ಹೆಚ್ಚಾಗಿ ಕಾಡುತ್ತಿದ್ದು, ವಿಶ್ವದಲ್ಲಿಯೇ ಅತೀ ಹೆಚ್ಚು ಈ ಕಾಯಿಲೆ ಹೊಂದಿರುವ ದೇಶದ ಸಾಲಿನಲ್ಲಿ ಭಾರತಕ್ಕೆ 2ನೇ ಸ್ಥಾನವಿದೆ. ದೇಶದಲ್ಲಿ ಕೇರಳ ಮೊದಲನೇ ಸ್ಥಾನದಲ್ಲಿದ್ದರೆ ಕರ್ನಾಟಕಕ್ಕೆ ನಾಲ್ಕನೇ ಸ್ಥಾನವಿದೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಡಯಾಬಿಟಿಕ್ ತಪಾಸಣೆಗೆ ಶಿಬಿರದಲ್ಲಿ ಮೊದಲ ಆದ್ಯತೆ ನೀಡಲಾಗಿದೆ.
ಕೊಡಗು ಮೆಡಿಕಲ್ ಕಾಲೇಜಿನ ಡಾ. ಲೋಕೇಶ್ ಗೌಡ ಡಯಾಬಿಟಿಕ್, ಡಾ. ಸುಧಾಕರ್ ನೇತ್ರ ತಪಾಸಣೆ, ಡಾ. ಹೇಮಂತ್ ಮತ್ತು ತಂಡ ದಂತ ಚಿಕಿತ್ಸೆಯನ್ನು ನಡೆಸಿಕೊಡಲಿದ್ದಾರೆ. ಆಸ್ಪತ್ರೆಯ ಬಸ್ ರೋಟರಿ ಸಭಾಂಗಣದ ಎದುರುಗಡೆ ನಿಲುಗಡೆಗೊಳ್ಳಲಿದ್ದು, ಬಸ್ ಒಳಗೆ ದಂತ ತಪಾಸಣೆ ಮಾಡಲಾಗುವದು ಎಂದು ಮೋಹನ್ ಅಪ್ಪಾಜಿ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಮೃನಾಲಿನಿ ಚಿಣ್ಣಪ್ಪ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ 98453 31431 ಸಂಪರ್ಕಿಸಬಹುದಾಗಿದೆ.