ವೀರಾಜಪೇಟೆ, ಜ. 27: ಅರಮೇರಿ ಗ್ರಾಮದ ಪೊಯ್ಯಟ್ಟೀರ ಮುಕುಂದ ಎಂಬವರ ಪಾಳು ಬಿದ್ದ ಗದ್ದೆಯಲ್ಲಿ ಅಂದಾಜು 20 ವಯಸ್ಸಿನ ಯುವತಿಯ ಮೃತದೇಹ ಪತ್ತೆಯಾಗಿದೆ. ಯುವತಿಯು ಬರ್ಬರವಾಗಿ ಕೊಲೆಯಾಗಿದ್ದು, ಮೃತ ದೇಹದ ಪಕ್ಕದಲ್ಲಿ ವ್ಯಾನಿಟಿ ಬ್ಯಾಗ್ ದೊರೆತಿದೆ. ಬ್ಯಾಗನ್ನು ಶೋಧಿಸಿದಾಗ ಬ್ಯಾಗ್‍ನಲ್ಲಿ ಯುವತಿಯ ಬಟ್ಟೆಗಳು, ಚಾಲನೆಯಲ್ಲಿಲ್ಲದ ಒಂದು ಮೊಬೈಲ್ ಜೊತೆಗೆ ಆಕೆಯ ಪಾನ್ ಕಾರ್ಡ್ ದೊರೆತಿದ್ದು ಅದರಲ್ಲಿ ಈಕೆಯ ಹೆಸರು ಮಾರ್ಜಿನಾ ಕಾಟೂನ್, ತಂದೆಯ ಹೆಸರು ಮುಂತಾಜ್ ಆಲಿ ಎಂದು ನಮೂದಿಸಲಾಗಿದೆ. ಪ್ರಕರಣದ ತನಿಖೆಗಾಗಿ ಎರಡು ತನಿಖಾ ತಂಡಗಳನ್ನು ರಚಿಸಲಾಗಿದೆ.
ಮೃತದೇಹ ಪತ್ತೆಯಾದ ತೋಟದ ಮಾಲೀಕರು ಬೆಂಗಳೂರಿನಲ್ಲಿ ನೆಲೆಸಿದ್ದು, ತೋಟವನ್ನು ರೈಟರ್ ನಿರ್ವಹಣೆ ಮಾಡುತ್ತಿದ್ದರು. ಎಂದಿನಂತೆ ತೋಟದ ರೈಟರ್ ಕಾರ್ಮಿಕರೊಂದಿಗೆ ತೆರಳಿದ್ದಾಗ ತೋಟದ ಅಂಚಿನಲ್ಲಿ ರೈಟರ್‍ಗೆ ಅನತಿ ದೂರದಿಂದ ದುರ್ವಾಸನೆ ಬಂದಿದ್ದು, ಪ್ರಾಣಿಯೊಂದು ಸತ್ತಿರಬಹುದು ಎಂಬ ಶಂಕೆಯೊಂದಿಗೆ ಮುಂದೆ ಸಾಗಿದ್ದಾರೆ. ಕಾರ್ಮಿಕರನ್ನು ಹುಡುಕಲು ಹೇಳಿದ್ದಾರೆ. ಹುಡುಕಲು ತೆರಳಿದ ಕಾರ್ಮಿಕರಿಗೆ ಗದ್ದೆಯ ಸನಿಹದ ಕಾರೆಕಾಡು ಎಂಬಲ್ಲಿ ಕುರುಚಲು ಗಿಡಗಳ ಮಧ್ಯಭಾಗದಲ್ಲಿ ರುಂಡ ಬೇರ್ಪಟ್ಟು ದೇಹ ಬೇರೆಯಾಗಿ ಕೈಗಳು ಬೇರೆ ಬೇರೆಯಾಗಿ ಬಿದ್ದಿರುವ ಯುವತಿಯ ಮೃತದೇಹ ಗೋಚರಿಸಿದೆ. ಇದರಿಂದ ಗಾಬರಿಗೊಂಡು ರೈಟರ್ ಬಳಿ ಬಂದು ವಿಷಯ ತಿಳಿಸಿದ್ದಾರೆ.
ನಂತರ ರೈಟರ್ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರು ಭೇಟಿ ನೀಡಿ ಕೊಲೆ ಆರೋಪಿಗಳನ್ನು ಬಂಧಿಸಲು ತನಿಖೆ ಚುರುಕುಗೊಳಿ ಸುವಂತೆ ಸೂಚಿಸಿದ್ದಾರೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದರಿಂದ ವಿಧಿ ವಿಜ್ಞಾನ ಕೇಂದ್ರ ತನಿಖಾ ತಂಡ ಹಾಗೂ ಮಡಿಕೇರಿಯ ವೈದ್ಯರ ತಂಡ ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲಿ ಶವ ಪರೀಕ್ಷೆ ಮಾಡಿದ್ದು, ನಂತರ ಅಂಗಾಂಗಗಳನ್ನು ಒಂದೆಡೆ ಶೇಖರಿಸಿ ವೀರಾಜಪೇಟೆ ಮೀನುಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. - ಡಿ.ಎಂ.ಆರ್./ಕೆ.ಕೆ.ಎಸ್.