ಕುಶಾಲನಗರ, ಜ. 26: ಯಾವದೇ ಷರತ್ತಿಗೆ ಒಳಪಡಿಸದೆ ಸಹಕಾರ ಸಂಘದ ಸಾಲ ಮನ್ನಾ ಮಾಡುವಲ್ಲಿ ಸರಕಾರ ಚಿಂತನೆ ಹರಿಸಬೇಕು ಎಂದು ಮಾಜಿ ಸಚಿವರು ಹಾಗೂ ಹಿರಿಯ ಸಹಕಾರಿ ಯಂ.ಸಿ. ನಾಣಯ್ಯ ಸಲಹೆಯಿತ್ತು. ಕುಶಾಲನಗರ ನಂ. 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ, ಬೆಳೆ ಕುಂಠಿತ ಇಂತಹ ಬೆಳವಣಿಗೆಗಳಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಹಕಾರ ಕ್ಷೇತ್ರದ ಮೂಲಕ ಮಾತ್ರ ತಳಮಟ್ಟದ ಜನರಿಗೆ ಸರಕಾರದ ಯೋಜನೆಗಳನ್ನು ತಲಪಿಸಲು ಸಾಧ್ಯ ಎಂದ ಅವರು, ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಸಾಲಮನ್ನಾಕ್ಕೆ ರೂ. 1 ಲಕ್ಷಗಳ ಮಿತಿ ನಿಗದಿಪಡಿಸಿದ್ದು, ಅದನ್ನು ರೂ. 3 ಲಕ್ಷದ ತನಕ ಸಂಪೂರ್ಣ ಸಾಲಮನ್ನಾಕ್ಕೆ ಕೃಷಿಕರ ಪರವಾಗಿ ಆಗ್ರಹಿಸುತ್ತಿದ್ದೇನೆ ಎಂದರು.
ರಾಜ್ಯದಲ್ಲಿ ಈಗಾಗಲೇ 176 ತಾಲೂಕುಗಳಲ್ಲಿ 156 ತಾಲೂಕುಗಳು ಬರಪೀಡಿತವಾಗಿವೆ. ಕೊಡಗು ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಷ್ಟ್ರೀಯ ಬ್ಯಾಂಕುಗಳು ಯಾವದೇ ರೀತಿಯ ಸಹಾಯಹಸ್ತ ನೀಡುತ್ತಿಲ್ಲ ಎಂದರು.
ಸಹಕಾರ ಕ್ಷೇತ್ರದ ಬೆಳವಣಿಗೆಗೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕಾದ ಚಿಂತನೆ ಅಗತ್ಯವಿದೆ ಎಂದು ನಾಣಯ್ಯ ಅವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಸಂಸ್ಕøತಿ, ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮ ಅಗತ್ಯವಾಗಿದೆ ಎಂದ ನಾಣಯ್ಯ ಅವರು, ಬೆಟ್ಟ, ಗುಡ್ಡಗಳಲ್ಲಿ ಹೋಂಸ್ಟೇಗಳು ಮಿತಿಮೀರಿ ನಿರ್ಮಾಣಗೊಳ್ಳುತ್ತಿವೆ. ಕೆಲವೆಡೆ ಹೋಂಸ್ಟೇಗಳು ಜೂಜು ಕೇಂದ್ರಗಳು, ವೇಶ್ಯಾವಾಟಿಕೆ ತಾಣಗಳಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಪ್ರವಾಸೋದ್ಯಮ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಸಾಲಮನ್ನಾ ಬಗ್ಗೆ ಸಂಬಂಧಿಸಿದ ಸಚಿವರ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವದು ಎಂದರಲ್ಲದೆ ದಾಖಲೆಗಳ ಸಂಗ್ರಹ ಪ್ರಗತಿಯಲ್ಲಿ ಇರುವ ಹಿನ್ನೆಲೆಯಲ್ಲಿ ಸಾಲಮನ್ನಾ ಪ್ರಕ್ರಿಯೆ ಸ್ವಲ್ಪ ವಿಳಂಭವಾಗಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಹೋಂಸ್ಟೇ ಗಳಿಗೆ ಕಡ್ಡಾಯ ನೋಂದಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಇದರ ಅನುಷ್ಠಾನ ತಡವಾಗಿದೆ ಎಂದರು.
ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆ ನಿರ್ಮಾಣ ಮತ್ತು ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದ ಸಚಿವರು, ಯಾವದೇ ರೀತಿಯ ಪರಿಸರ ಮಾರಕ ಯೋಜನೆಗಳಿಗೆ ಅನುವು ಮಾಡುವದಿಲ್ಲ ಎಂದು ಭರವಸೆ ನೀಡಿದರು. ಜನರ ನಿರೀಕ್ಷೆಗೆ ತಕ್ಕಂತೆ ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸವನ್ನು ಪಕ್ಷಾತೀತವಾಗಿ ನಡೆಸುವದಾಗಿ ತಿಳಿಸಿದರು.
ಸಂಘದ ಕಚೇರಿಯ ಭದ್ರತಾ ಕೊಠಡಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಸಹಕಾರಿ ಕ್ಷೇತ್ರದ ದುರುಪಯೋಗ ಮಾಡಿದಲ್ಲಿ ಕಠಿಣ ಶಿಕ್ಷೆ ಅಗತ್ಯ ಎಂದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸ್ವಯತ್ತತೆ ಅಗತ್ಯ ಎಂದರಲ್ಲದೆ, ಜಿಲ್ಲೆಯಲ್ಲಿ ಕೇವಲ 203 ಜನಕ್ಕೆ ಮಾತ್ರ ಸಾಲಮನ್ನಾ ಆಗಿರುವ ಬಗ್ಗೆ ಮಾಹಿತಿ ಒದಗಿಸಿದರು. ರಾಷ್ಟ್ರೀಕೃತ ಬ್ಯಾಂಕ್ ಮುಖಾಂತರ ಸಾಲಮನ್ನಾ ಪ್ರಗತಿ ಶೂನ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ಸಹಕಾರ ಸಂಘ ಸಧ್ಯದಲ್ಲಿಯೇ ಶತಮಾನೋತ್ಸವ ಆಚರಣೆ ಕಾಲಘಟ್ಟದಲ್ಲಿದ್ದು ಕೋ-ಆಪರೇಟಿವ್ ಸಂಸ್ಥೆಗಳು ಕಾರ್ಪೊರೇಟ್ ಸಂಸ್ಥೆಗಳಂತೆ ಅಭಿವೃದ್ಧಿಗೊಳ್ಳುತ್ತಿರುವದು ಅಭಿನಂದನೀಯ ವಿಚಾರ ಎಂದರು.
ಈ ಸಂದರ್ಭ ಹಿರಿಯ ಸಹಕಾರಿ ಎಂ.ಸಿ.ನಾಣಯ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ.ಆರ್.ಶರವಣಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಸಹಕಾರ ಇಲಾಖೆ ಅಧಿಕಾರಿ ಎಚ್.ಡಿ.ರವಿಕುಮಾರ್, ಕುಶಾಲನಗರ ಸಂಘದ ಉಪಾಧ್ಯಕ್ಷ ಕಾರ್ತೀಶನ್, ನಿರ್ದೇಶಕರು, ಸಲಹಾ ಸಮಿತಿ ಸದಸ್ಯರು ಇದ್ದರು. ರವಿ ನಾಡಗೀತೆ, ನಂಜುಂಡಸ್ವಾಮಿ ರೈತಗೀತೆಯೊಂದಿಗೆ, ಪೊನ್ನಚ್ಚನ ಮೋಹನ್ ಮತ್ತು ಕವಿತಾ ಮೋಹನ್ ನಿರೂಪಿಸಿ, ವಿ.ಎಸ್. ಆನಂದಕುಮಾರ್ ವಂದಿಸಿದರು.