ಸೋಮವಾರಪೇಟೆ, ಜ. 26: ಬೆಂಗಳೂರಿನ ಕೇಂದ್ರೀಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆ ವತಿಯಿಂದ, ಗಿರಿಜನ ಉಪಯೋಜನೆ ಅಡಿಯಲ್ಲಿ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಮೀನು ಮರಿ ಪಾಲನಾ ಘಟಕವನ್ನು ಅನುಷ್ಠಾನಗೊಳಿಸಲಾಯಿತು.

ಈ ಯೋಜನೆಗೆ ರಾಜ್ಯದ ಹಾರಂಗಿ ಜಲಾಶಯವನ್ನು ಆಯ್ಕೆಗೊಳಿಸಲಾಗಿದ್ದು, ದೊಡ್ಡಿಗಳನ್ನು ನಿರ್ಮಿಸಿ ಒಂದು ವರ್ಷಗಳ ಕಾಲ ಮೀನು ಮರಿಗಳ ಪಾಲನೆಯನ್ನು ನಿರ್ವಹಿಸಿ, ಹಾರಂಗಿ ಜಲಾಶಯದಲ್ಲಿ ಮೀನುಗಳ ಬೆಳವಣಿಗೆ, ಜಲಾಶಯದಲ್ಲಿ ಉತ್ಪಾದಕತೆಯ ಸಾಮಥ್ರ್ಯವನ್ನು ತಿಳಿಯಲಾಗುವದು ಎಂದು ಸಂಸ್ಥೆಯ ವಿಜ್ಞಾನಿ ವಿಜಯ್‍ಕುಮಾರ್ ತಿಳಿಸಿದರು.

ಈ ಸಂದರ್ಭ ಸಂಸ್ಥೆಯ ವಿಜ್ಞಾನಿಗಳಾದ ಪ್ರೀತಾ ಪಣಿಕ್ಕರ್, ವಿ.ಎಲ್. ರಮ್ಯ, ಸೋಮವಾರಪೇಟೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಅವರುಗಳು ಉಪಸ್ಥಿತರಿದ್ದು, ಪ್ರಾತ್ಯಕ್ಷಿಕೆ ನೀಡಿದರು.

ಕಾವೇರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಗಿರೀಶ್ ಸೇರಿದಂತೆ ಮೀನುಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾಹಿತಿ ಪಡೆದುಕೊಂಡರು.