ಮಡಿಕೇರಿ, ಜ. 25: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜಯಂತಿ ಆಚರಣೆಗೆ ಕೊನೆಗೂ ಸರಕಾರ ಒಪ್ಪಿಗೆ ಸೂಚಿಸಿದ್ದು, ಈ ಕುರಿತು ರೂ. 10 ಲಕ್ಷ ಅನುದಾನ ನೀಡಲು ಕ್ರಮಕೈಗೊಂಡಿರುವದಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಬಂದಿದೆ. ಸರಕಾರಿ ಕಾರ್ಯಕ್ರಮವಾಗಿ ಕಳೆದ ಹಲವು ವರ್ಷಗಳಿಂದ ತಾ. 28ರಂದು ಆಚರಿಸಲ್ಪಡುತ್ತಿದ್ದ ಕಾರ್ಯಪ್ಪ ಅವರ ಜಯಂತಿಯ ವಿಚಾರದಲ್ಲಿ ಈ ತನಕ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಯಿಂದ ಯಾವದೇ ಸ್ಪಷ್ಟ ಸೂಚನೆಗಳು ಬಾರದ ಹಿನ್ನೆಲೆಯಲ್ಲಿ ಈ ಬಗ್ಗೆ ಗೊಂದಲವೇರ್ಪಟ್ಟಿತ್ತು.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕ್ರಿಯಾ ಯೋಜನೆ ಯಲ್ಲಿ ಈ ಪ್ರಸ್ತಾಪ ಇಲ್ಲದ ಕಾರಣ ಜಿಲ್ಲಾಡಳಿತವಾಗಲಿ, ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿ ಗಳಾಗಲಿ ಪರದಾಡುವಂತಾಗಿತ್ತು. ಈ ಬಗ್ಗೆ ಇತ್ತೀಚೆಗೆ ‘ಶಕ್ತಿ’ ಬೆಳಕು ಚೆಲ್ಲಿದ್ದು, ವೀರಸೇನಾನಿಯ ಜನ್ಮದಿನಾ ಚರಣೆಯ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆಕ್ಷೇಪಗಳು ಕೇಳಿಬಂದಿದ್ದವು. ಕಾರ್ಯಪ್ಪ ಜಯಂತಿಯನ್ನು ಆರಂಭಿಸಿದ್ದ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂ ಸೇರಿದಂತೆ ವಿವಿಧ ಸಂಘಟನೆಗಳು ಈ ವಿಚಾರದಲ್ಲಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದವು.ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾಡಳಿತದ ಮೂಲಕ ಈ ಬಗ್ಗೆ ಸಲ್ಲಿಸಲಾಗಿದ್ದ ಮನವಿ ಪತ್ರಕ್ಕೂ ತಾ. 24ರ ತನಕವೂ ಸೂಕ್ತ ಉತ್ತರ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಫೋರಂ ಸೇರಿದಂತೆ ಇನ್ನಿತರ ಸಂಘಟನೆಗಳ ಮೂಲಕವೇ ಕಾರ್ಯಪ್ಪ ಜಯಂತಿ ಆಚರಿಸುವ ನಿರ್ಧಾರವನ್ನೂ ಪ್ರಕಟಿಸಲಾಗಿತ್ತು. ಜನಪ್ರತಿನಿಧಿಗಳೂ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಈ ಬಗ್ಗೆ ಆಕ್ಷೇಪಗಳು ವ್ಯಕ್ತಗೊಳ್ಳುತ್ತಿದ್ದ ಸನ್ನಿವೇಶದ ನಡುವೆ ಈ ವಿಚಾರದ ಬಗ್ಗೆ ವಿಧಾನ ಪರಿಷತ್ ಸದಸ್ಯೆಯಾಗಿರುವ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಇಲಾಖಾ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಸಂಪರ್ಕಿಸಿ ಹಿಂದಿನ ವರ್ಷಗಳ ಮಾಹಿತಿಯೊಂದಿಗೆ ಅನುದಾನ ಬಿಡುಗಡೆಯೊಂದಿಗೆ ಸರಕಾರಿ ಕಾರ್ಯಕ್ರಮವಾಗಿ ಮುಂದುವರಿಸುವ ಕುರಿತು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಪತ್ರ ಬಂದಿದ್ದು ಕಾರ್ಯಪ್ಪ ಅವರ 120 ನೇ ಜನ್ಮದಿನಾಚರಣೆ ಆಚರಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಾಹಿತಿ ನೀಡಲಾಗಿದೆ.
(ಮೊದಲ ಪುಟದಿಂದ) ಅಲ್ಲದೆ ಈ ಕಾರ್ಯಕ್ರಮಕ್ಕೆ ರೂ. 10 ಲಕ್ಷ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಇಲಾಖಾ ನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದಾರೆ.
ಫೋರಂನಿಂದ ಸಹಕಾರ
ಈ ನಡುವೆ ಸರಕಾರದಿಂದ ಹಣ ಬಿಡುಗಡೆಯಾಗದಿದ್ದ ಹಿನ್ನೆಲೆಯಲ್ಲಿ ಫೀ.ಮಾ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ ವತಿಯಿಂದ ತಾ. 28 ರಂದು ಸರಳ ರೀತಿಯಲ್ಲಿ ಕಾರ್ಯಪ್ಪ ಅವರ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿತ್ತು. ಈ ಕುರಿತು ಫೋರಂನ ಪದಾಧಿಕಾರಿಗಳಾದ ಉಳ್ಳಿಯಡ ಎಂ. ಪೂವಯ್ಯ, ಕರ್ನಲ್ ಸುಬ್ಬಯ್ಯ, ಮೇಜರ್ ಬಿ.ಎ. ನಂಜಪ್ಪ ಹಾಗೂ ಕಲ್ಲುಮಾಡಂಡ ನವೀನ್ ಬೆಳ್ಯಪ್ಪ ಇವರುಗಳು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಆದರೆ, ಇಂದು ಸಂಜೆ ಸರಕಾರದಿಂದ ಹಣ ಬಿಡುಗಡೆಯಾಗಿರುವದಾಗಿ ಅಧಿಕೃತ ಆದೇಶ ಹೊರಬಿದ್ದುದರಿಂದ ಇದೀಗ ಫೋರಂ ತನ್ನ ನಿರ್ಧಾರವನ್ನು ಕೈಬಿಟ್ಟಿರುವದಾಗಿ ಮೇಜರ್ (ನಿ) ನಂದ ನಂಜಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಸರಕಾರ ನಡೆಸುವ ಕಾರ್ಯಪ್ಪ ಜಯಂತಿ ಕಾರ್ಯಕ್ರಮಕ್ಕೆ ಫೋರಂನಿಂದ ಸಹಕರಿಸುವದಾಗಿ ತಿಳಿಸಿದ್ದಾರೆ. ಆದರೆ, ತಾ.28 ರ ಜನ್ಮ ದಿನದಂದೇ ಜಯಂತಿ ನಡೆಯಬೇಕೆಂದು ಅವರು ಸಲಹೆಯಿತ್ತಿದ್ದಾರೆ.