ಮಡಿಕೇರಿ, ಜ. 25: ಕಳೆದ ಮುಂಗಾರು ಮಳೆ ಹಾಗೂ ಜಲಸ್ಫೋಟದಿಂದ ತೀವ್ರ ಹಾನಿಗೊಂಡಿರುವ ರಸ್ತೆಗಳಿಗೆ ಶಾಶ್ವತ ಕಾಯಕಲ್ಪ ನೀಡಲು ರಾಜ್ಯ ಸರಕಾರಕ್ಕೆ ಲೋಕೋಪಯೋಗಿ ಇಲಾಖೆಯಿಂದ ರೂ. 394 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಈಗಾಗಲೇ ಕರ್ನಾಟಕ - ಕೇರಳ ಗಡಿಯಲ್ಲಿ ಹಾನಿ ಗೊಂಡಿದ್ದ ಮಾಕುಟ್ಟ ರಸ್ತೆಗೆ ಶಾಶ್ವತ ಕಾಯಕಲ್ಪ ನೀಡುವ ಕಾರ್ಯ ಭರದಿಂದ ಸಾಗಿದೆ.ಇನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮೂಲಕವೂ ಮಂಗಳೂರು - ಸಂಪಾಜೆ ನಡುವೆ ಕೆಲಸಕ್ಕೆ ಶಾಶ್ವತ ಯೋಜನೆ ರೂಪುಗೊಂಡಿದೆ ಎಂದು ಸಂಬಂಧಿಸಿದ ಮೂಲಗಳು ತಿಳಿಸಿವೆ. ಭಾಗಮಂಡಲ - ಕರಿಕೆ ನಡುವೆ ಮಳೆಯಿಂದ ಅಲ್ಲಲ್ಲಿ ಹಾನಿಗೊಂಡಿದ್ದ ರಸ್ತೆಯ ದುರಸ್ತಿ ಕೆಲಸವನ್ನು ಕೂಡ ಇದೇ ವೇಳೆ ನಿರ್ವಹಿಸಲಾಗುತ್ತಿದೆ.ಒಟ್ಟಿನಲ್ಲಿ ಕೊಡಗಿನ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಹಾನಿಗೊಂಡಿರುವ ಸ್ಥಳಗಳಲ್ಲಿ ಈ ಸಾಲಿನ ಮುಂಗಾರು ಮಳೆಗೆ ಮುನ್ನ ಕೆಲಸ ನಿರ್ವಹಿಸುವದರೊಂದಿಗೆ ಮತ್ತೆ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಅನುಸರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಕಾರ್ಯಪಾಲಕ ಪ್ರಬಾರ ಅಭಿಯಂತರ ಕೆ.ಇ. ಇಬ್ರಾಹಿಂ ಖಚಿತಪಡಿಸಿದ್ದಾರೆ.ಕೊಡಗಿನ ರಸ್ತೆಗಳ ಸಮಸ್ಯೆ ಕುರಿತು ಇಬ್ರಾಹಿಂ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಈಗಾಗಲೇ ಮಾಕುಟ್ಟದಲ್ಲಿ ತೀವ್ರ ಹಾನಿಗೊಂಡಿರುವ 12 ಕಡೆಗಳಲ್ಲಿ ತಡೆಗೋಡೆ ಹಾಗೂ ಮೋರಿ ಮತ್ತು ಸೇತುವೆ ಸಹಿತ ಶಾಶ್ವತ ಕೆಲಸ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಭಾಗಮಂಡಲ - ಕರಿಕೆ ಮಾರ್ಗ ದಲ್ಲಿಯೂ 10 ಕಡೆಗಳಲ್ಲಿ ಹೆದ್ದಾರಿ ಅಭಿವೃದ್ಧಿ ಕೆಲಸ ಈಗಾಗಲೇ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮಾಕುಟ್ಟ ಅಂತರರಾಜ್ಯ ಹೆದ್ದಾರಿಯಲ್ಲಿ ಭೂಕುಸಿತದಿಂದ ಅಪಾಯ ಸಂಭವಿಸಿರುವ ಕಡೆಗಳಲ್ಲಿ ಆಧುನಿಕ ತಂತ್ರಜ್ಞಾನ ದೊಂದಿಗೆ ಕಾಮಗಾರಿಯನ್ನು

(ಮೊದಲ ಪುಟದಿಂದ) ನಿರ್ವಹಿಸಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ ಅವರು, ಮುಂದಿನ ಮಳೆಗಾಲಕ್ಕೆ ಮುನ್ನವೇ ಸಾಧ್ಯವಿರುವಷ್ಟು ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನ ನಡೆದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೂ. 44 ಕೋಟಿ ಮಂಜೂರು : ಕಳೆದ ಮಳೆ ಹಾನಿಯ ವೇಳೆ ರಸ್ತೆಗಳ ದುರಸ್ತಿಗಾಗಿ ಸರಕಾರದಿಂದ ಇಲಾಖೆಗೆ ರೂ. 44 ಕೋಟಿ ಹಣ ಮಂಜೂರಾಗಿದೆ. ಈ ಪೈಕಿ ರೂ. 22 ಕೋಟಿ ಬಿಡುಗಡೆಯಾಗಿದ್ದು, ಪ್ರಸಕ್ತ ಆ ಮೊತ್ತದಿಂದ ಬಹುತೇಕ ತುರ್ತು ಕೆಲಸಗಳನ್ನು ನಿರ್ವಹಿಸುತ್ತಿರುವದಾಗಿ ಸ್ಪಷ್ಟಪಡಿಸಿದರು. ಅಲ್ಲದೆ ಲೋಕೋಪಯೋಗಿ ಇಲಾಖೆಯ ಕೆಲಸಗಳಲ್ಲಿ ಗುತ್ತಿಗೆದಾರರು ಸ್ಥಳೀಯರಾಗಿದ್ದು, ಕಾಮಗಾರಿಯ ಮೊತ್ತ ಸಮಯಾನುಸಾರ ಪಾವತಿಸಲಾಗುತ್ತಿದೆ ಎಂದು ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿದರು.

ಆಂತರಿಕ ವಿಚಾರ: ಇಲ್ಲಿನ ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೆ.ಬಿ.ಆರ್. ಕನ್ಸ್‍ಸ್ಟ್ರಕ್ಷನ್ ಉದ್ದಿಮೆಗೆ ವಹಿಸಿದ್ದು, ನಿಯಮಾನುಸಾರ ಕಾಮಗಾರಿ ಪೂರ್ಣಗೊಂಡಂತೆ ಹಣ ಪಾವತಿಯಾಗಿದೆ, ಗುತ್ತಿಗೆ ಸಂಸ್ಥೆ ನೇಮಿಸಿಕೊಂಡಿದ್ದ ವ್ಯಕ್ತಿಗೂ, ಉದ್ದಿಮೆ ಪಾಲುದಾರರಾಗಿರುವ ನಿವೃತ್ತ ಸೈನ್ಯಾಧಿಕಾರಿ ಶಶಿಧರ್ ನಡುವೆ ಆಂತರಿಕ ವಿವಾದ ಹುಟ್ಟಿಕೊಂಡಿದ್ದು, ಇಲಾಖೆಗೆ ಯಾವದೇ ಸಂಬಂಧವಿಲ್ಲವೆಂದು ಇಬ್ರಾಹಿಂ ಸ್ಪಷ್ಟನೆ ನೀಡಿದರು.

ಸರಕಾರದಿಂದ ರಾಜ್ಯ ಲೋಕೋಪಯೋಗಿ ಎಲ್ಲಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಗೊಂಡರೆ, ಕಾಮಗಾರಿ ಚುರುಕುಗೊಳ್ಳುವ ಆಶಯ ವ್ಯಕ್ತಪಡಿಸಿದರು.