ಸೋಮವಾರಪೇಟೆ, ಜ. 25: ‘ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬದ್ಧವಾಗಿದ್ದು, ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿನ ಗಾಂಜಾ ದಂಧೆಗೆ ಕಡಿವಾಣ ಹಾಕುತ್ತೇವೆ. ಗಾಂಜಾ ದಂಧೆಯಲ್ಲಿ ಪೆಡ್ಲಿಂಗ್ (ಸರಬರಾಜು) ಮಾಡುತ್ತಿ ರುವವರ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ನೀಡಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪಿ. ಹೇಳಿದರು.ಕೊಡಗು ಜಿಲ್ಲಾ ಪೊಲೀಸ್ ಮತ್ತು ಸೋಮವಾರಪೇಟೆ ಪೊಲೀಸ್ ಠಾಣೆ ವತಿಯಿಂದ ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿಬಂದ ದೂರುಗಳನ್ನು ಆಲಿಸಿದ ಪೊಲೀಸ್ ವರಿಷ್ಠಾಧಿಕಾರಿಗಳು, ಅಕ್ರಮಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಲಿದೆ ಎಂದರು.ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಗಾಂಜಾ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ನಡೆಯುತ್ತಿದೆ. ಗಾಂಜಾ ಪ್ರಕರಣಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಗಾಂಜಾ ಸರಬರಾಜು ಮಾಡುವವರು ಮತ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ ಖಚಿತ. ಪೆಡ್ಲಿಂಗ್ ಮಾಡುವವರ ಬಗ್ಗೆ ಸ್ಥಳೀಯ ಪೊಲೀಸರಿಗೆ ಅಥವಾ ಎಸ್.ಪಿ. ಕಚೇರಿಗೆ ಮಾಹಿತಿ ನೀಡಿ. ಗಾಂಜಾ ಸೇದಿದವರ ಬಗ್ಗೆ ಮಾಹಿತಿ ನೀಡಿದರೆ ಅವರನ್ನು ವಶಕ್ಕೆ ಪಡೆದು ಮೂತ್ರ ಪರೀಕ್ಷೆ ಮಾಡಿಸಿ ಮೊಕದ್ದಮೆ ದಾಖಲಿಸುತ್ತೇವೆ ಎಂದರು.

ಪಟ್ಟಣದ ಬಜೆಗುಂಡಿ ಗ್ರಾಮದಿಂದ ಇತರೆಡೆಗೆ ಗಾಂಜಾ ಸರಬರಾಜಾಗುತ್ತಿದೆ. ಕಾಲೇಜು ಆವರಣದಲ್ಲೇ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾಲೋನಿಗಳಲ್ಲಿ ಹೆಚ್ಚಿನ ಯುವಕರು ಗಾಂಜಾಕ್ಕೆ ದಾಸರಾಗಿದ್ದಾರೆ. ಆ ಮೂಲಕ ಸಮಾಜದಲ್ಲಿ ಅಹಿತಕರ ಘಟನೆಗಳಿಗೆ ಕಾರಣರಾಗುತ್ತಿದ್ದಾರೆ ಎಂದು ಸಭೆಯಲ್ಲಿದ್ದ ಸಾರ್ವಜನಿಕರು ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಸೆಳೆದರು.

ಪಾರ್ಕಿಂಗ್ ವ್ಯವಸ್ಥೆ ಸುಗಮ ಗೊಳಿಸಲು ಮತ್ತು ಕಾನೂನು ಮೀರಿ ಓಡಾಡುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಒಂದೇ ವಾರದಲ್ಲಿ 2.15 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿ ಮೊಕದ್ದಮೆ ದಾಖಲಿಸಿದ್ದೇವೆ. ಈ ಕಾರ್ಯ

(ಮೊದಲ ಪುಟದಿಂದ) ಇನ್ನೂ ಮುಂದುವರೆಯಲಿದೆ ಎಂದು ವರಿಷ್ಠಾಧಿಕಾರಿಗಳು ತಿಳಿಸಿದರು.

ಅಕ್ರಮವಾಗಿ ಗೋವುಗಳು ಸಾಗಾಟಗೊಳ್ಳುತ್ತಿದ್ದರೆ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರೇ ತಡೆದು ಗಲಾಟೆಗಳಾದರೆ ತಡೆಯಲು ಹೋದವರ ವಿರುದ್ಧವೂ ಕೇಸ್ ದಾಖಲಾಗುತ್ತದೆ. ಪೊಲೀಸರಿಗೆ ಮಾಹಿತಿ ನೀಡಿದರೆ ಅವರುಗಳೇ ಕ್ರಮ ಜರುಗುತ್ತಾರೆ ಎಂದ ಅವರು, ಚೆಕ್ ಪೋಸ್ಟ್‍ಗಳನ್ನು ಹೆಚ್ಚಿಸುವದರೊಂದಿಗೆ ಅಕ್ರಮಗಳಿಗೆ ತಡೆ ಹಾಕುತ್ತೇವೆ ಎಂದರು.

ಪಟ್ಟಣ ಸೇರಿದಂತೆ ಆಯಕಟ್ಟಿನ ಪ್ರದೇಶದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗುತ್ತದೆ. ಈಗಾಗಲೇ ಕೆಟ್ಟುನಿಂತಿರುವ ಸಿ.ಸಿ. ಕ್ಯಾಮೆರಾ ಗಳನ್ನೂ ಸರಿಪಡಿಸಲಾಗುವದು. ಸೋಮವಾರಪೇಟೆ ಪೊಲೀಸ್ ಠಾಣೆಗೆ ನೂತನ ವಾಹನ ಒದಗಿಸಿಕೊಡಲಾಗುವದು. ಮೈಕ್ರೋ ಫೈನಾನ್ಸ್‍ಗಳ ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸಲಾಗುವದು ಎಂದ ಪೊಲೀಸ್ ವರಿಷ್ಠಾಧಿಕಾರಿಗಳು, ಇತ್ತೀಚೆಗೆ ಸೈಬರ್ ಕ್ರೈಂ ಹೆಚ್ಚುತ್ತಿದೆ. ಅನಾಮಧೇಯ ಕರೆಗಳ ಮೂಲಕ ಬ್ಯಾಂಕ್‍ನಿಂದ ಹಣ ಲಪಟಾಯಿಸುವ ಘಟನೆಗಳು ನಡೆಯುತ್ತಿದ್ದು, ಮೊಬೈಲ್ ಕರೆಗಳಲ್ಲಿ ಯಾರೂ ಸಹ ತಮ್ಮ ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಕಿವಿಮಾತು ನುಡಿದರು.

ಪಟ್ಟಣದಲ್ಲಿ ನಡುರಾತ್ರಿ ನಡೆದ ದನ ಕಳ್ಳತನ, ಕಾರುಗಳಿಗೆ ಟಿಂಟ್ ಗ್ಲಾಸ್ ಅಳಡಿಸಿರುವ ಬಗ್ಗೆ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಸಭೆಯ ಗಮನ ಸೆಳೆದರು. ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೋಮಪ್ಪ

ಹೇಳಿದರು.

ದನಗಳ್ಳರು ಮುಂದಿನ ದಿನಗಳಲ್ಲಿ ಗ್ರಾಮಕ್ಕೂ ಬರಬಹುದು. ಅಕ್ರಮ ಗೋ ಕಳ್ಳತನಕ್ಕೆ ಕಡಿವಾಣ ಹಾಕುವದ ರೊಂದಿಗೆ ಸಿಸಿ ಕ್ಯಾಮೆರಾ ದುರಸ್ತಿ ಗೊಳಿಸಬೇಕೆಂದು ಮೋಹಿತ್ ತಿಮ್ಮಯ್ಯ ಮನವಿ ಮಾಡಿದರು. ಇತ್ತೀಚೆಗೆ ಶಾಲೆಗಳಲ್ಲಿ ಕಳವು ಪ್ರಕರಣಗಳು ನಡೆಯುತ್ತಿದೆ. ಬೇನಾಮಿ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಐಗೂರಿನ ದಿನೇಶ್ ಸಭೆಯ ಗಮನಕ್ಕೆ ತಂದರು.

ತಮ್ಮ ಮನೆಯಲ್ಲಿ ಕಳ್ಳತನ ನಡೆದು ಹಲವು ತಿಂಗಳುಗಳೇ ಕಳೆದರೂ ಸ್ಥಳೀಯ ಪೊಲೀಸರು ಕಳ್ಳರನ್ನು ಹಿಡಿದಿಲ್ಲ. ಮನೆಯಲ್ಲಿದ್ದ ಚಿನ್ನ, ಹಣ, ಸಿಲಿಂಡರ್‍ಗಳನ್ನೂ ಕಳವು ಮಾಡಿದ್ದಾರೆ ಎಂದು ತಣ್ಣೀರುಹಳ್ಳದ ಜಯ ಅವರು ಎಸ್.ಪಿ. ಗಮನ ಸೆಳೆದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವೃತ್ತ ನಿರೀಕ್ಷಕರಿಗೆ ಸೂಚಿಸಲಾಯಿತು.

ಪೊಲೀಸರು ಇಸ್ಪೀಟ್ ಅಡ್ಡೆಗಳ ಮೇಲೆ ಧಾಳಿ ನಡೆಸುತ್ತಿದ್ದರೂ ಜಾಗ ಬದಲಿಸಿ ಇಸ್ಪೀಟ್ ಆಡಲಾಗುತ್ತಿದೆ ಎಂದು ನಳಿನಿ ಹೇಳಿದರು. ಸಂಜೆ 7 ಗಂಟೆ ನಂತರ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡುವಂತೆ ಅಭಿಷೇಕ್ ಮನವಿ ಮಾಡಿದರು. ಗೋ ಕಳ್ಳತನದ ಹಿಂದಿರುವ ಕೈವಾಡದ ಬಗ್ಗೆ ತನಿಖೆ ಮಾಡಿ ಎಂದು ಎಂ.ಬಿ. ಉಮೇಶ್ ಒತ್ತಾಯಿಸಿದರು. ಅಬಕಾರಿ ಇಲಾಖಾ ಕಚೇರಿ ಮುಂದೆ ಇರುವ ಹಳೆಯ ವಾಹನಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ರುಬೀನಾ ಮನವಿ ಮಾಡಿದರು.

ಗ್ರಾಮಗಳಲ್ಲಿ ಬೀಟ್ ಪೊಲೀಸ್ ನೇಮಿಸಬೇಕು. ಪಟ್ಟಣದಲ್ಲಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಪಾರ್ಕಿಂಗ್‍ಗೆ ಅವಕಾಶ ಕಲ್ಪಿಸಬೇಕು. ಬಿಳಿ ಫಲಕದ ವಾಹನಗಳಲ್ಲಿ ಬಾಡಿಗೆ ಮಾಡುವದಕ್ಕೆ ತಡೆಯೊಡ್ಡಬೇಕು. 3 ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸಬೇಕೆಂದು ರವೀಶ್ ಹೇಳಿದರು. ಮೈಕ್ರೋ ಫೈನಾನ್ಸ್‍ಗಳ ಕಿರುಕುಳದಿಂದ ಜೀವನ ಕಷ್ಟಕರವಾಗುತ್ತಿದೆ ಎಂದು ಬಜೆಗುಂಡಿಯ ಮಂಜುಳಾ, ವಸಂತ ಅವರುಗಳು ಅಳಲು ತೋಡಿಕೊಂಡರು.

ಪೊಲೀಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಿ. ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕಿ. ಮಾದಾಪುರ ಹೊರ ಠಾಣೆಯನ್ನು ಮೆಲ್ದರ್ಜೆಗೇರಿಸಿ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು. ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿಯನ್ನು ಕನಿಷ್ಟ 3 ವರ್ಷ ಇಲ್ಲೇ ಇರುವಂತೆ ನೋಡಿಕೊಳ್ಳಿ. ಯಾವದೇ ರಾಜಕೀಯ ಒತ್ತಡಗಳಿಗೆ ಮಣಿದು ವರ್ಗಾವಣೆ ಮಾಡಬೇಡಿ ಎಂದು ಹೆಚ್.ಎನ್. ನಾಗರಾಜ್ ಮನವಿ ಮಾಡಿದರು.

ಉಳಿದಂತೆ ಕೆ.ಎನ್. ದೀಪಕ್, ರಾಜಪ್ಪ, ಗಣೇಶ್, ಬಸಪ್ಪ, ಮಹೇಶ್, ಕಾರ್ತಿಕ್, ಅನಂತ್‍ರಾಮ್ ಸೇರಿದಂತೆ ಇತರರು ವಿವಿಧ ಸಮಸ್ಯೆಗಳ ಬಗ್ಗೆ ವರಿಷ್ಠಾಧಿಕಾರಿಗಳ ಗಮನ ಸೆಳೆದರು.

ಸಭೆಯಲ್ಲಿ ಡಿವೈಎಸ್‍ಪಿ ಮುರಳೀಧರ್, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಮರಿಸ್ವಾಮಿ, ಪೊಲೀಸ್ ಅಧಿಕಾರಿ ಗಳಾದ ಕ್ಯಾತೇಗೌಡ, ಜಯರಾಂ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜೀ ಅಧ್ಯಕ್ಷ ರಾಜಾರಾವ್, ಮುಖಂಡರಾದ ಕೆ.ಎ. ಯಾಕೂಬ್, ಹೊನ್ನಪ್ಪ ಅವರುಗಳು ಉಪಸ್ಥಿತರಿದ್ದರು.