ಮಡಿಕೇರಿ, ಜ.25: ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಮತ್ತು ರಾಷ್ಟ್ರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರಿತು ಮತ ಹಕ್ಕು ಚಲಾಯಿಸುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಮತದಾನವು ಅತ್ಯಮೂಲ್ಯವಾಗಿದೆ. ಮತ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ಮತದಾನ ಮಾಡಲೇಬೇಕು ಎಂಬ ಸಂಕಲ್ಪವನ್ನು ಅರ್ಹರು ಪಾಲಿಸಬೇಕು ಎಂದು ನುಡಿದರು.

ರಾಷ್ಟ್ರದಲ್ಲಿ ಶೇ.99 ರಷ್ಟಾದರೂ ಮತದಾನವಾಗಬೇಕು. ಇದರಿಂದ ರಾಷ್ಟ್ರದ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಡಿ.ಪವನೇಶ್ ಮಾತನಾಡಿ ಹದಿನೆಂಟು ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಮತದಾನ ಮಾಡಬೇಕು. ಮತದಾನ ಮಾಡದಿದ್ದಲ್ಲಿ ಸರ್ಕಾರವನ್ನು ನೈತಿಕವಾಗಿ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಅರ್ಹರೆಲ್ಲರೂ ಕಡ್ಡಾಯವಾಗಿ ಮತ ಹಕ್ಕು ಚಲಾಯಿಸುವಂತಾಗಬೇಕು ಎಂದು ಹೇಳಿದರು.

ಮತದಾನ ಮಾಡುವದು ಮೂಲಭೂತ ಕರ್ತವ್ಯವಾಗಬಹುದು. ಅರ್ಹರೆಲ್ಲರೂ ತಪ್ಪದೇ ಮತಹಕ್ಕು ಚಲಾಯಿಸಬೇಕು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತಹಕ್ಕು ಚಲಾಯಿಸಬೇಕು ಎಂದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ ಇಡೀ ವಿಶ್ವದಲ್ಲಿಯೇ ರಾಷ್ಟ್ರವು ಮಾದರಿ ಪ್ರಜಾಪ್ರಭುತ್ವವನ್ನು ಹೊಂದಿದ್ದು, ಸುಭದ್ರ ಆಡಳಿತ ವ್ಯವಸ್ಥೆಗೆ ಎಲ್ಲರೂ ಕೈಜೋಡಿಸಬೇಕಿದೆ. ಆ ನಿಟ್ಟಿನಲ್ಲಿ ಯುವಜನರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಮಾತನಾಡಿ ಹದಿನೆಂಟು ವರ್ಷ ಪೂರ್ಣಗೊಂಡವರೆಲ್ಲರೂ ಮತಹಕ್ಕು ಚಲಾಯಿಸಬೇಕು. ಯುವ ಜನರು ಯಾವದೇ ರೀತಿಯ ಒತ್ತಡ, ಆಮಿಷಗಳಿಗೆ ತುತ್ತಾಗದೆ ಮತದಾನ ಮಾಡಬೇಕು ಎಂದರು.

ಮತದಾನದ ಹಕ್ಕಿನ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನವಾಗಲು ಎಲ್ಲರೂ ಕೈಜೋಡಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್ ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆ ಎತ್ತಿಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ ಜನಾಂಗ, ಜಾತಿ, ಮತ ಭಾಷೆ ಅಥವಾ ಯಾವದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ ಎಂದು ಪ್ರತಿಜ್ಞಾ ಬೋಧಿಸಿದರು.

ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮೂಲಕ ದೃಷ್ಟಿ ದೋಷವುಳ್ಳವರಿಗೆ ಇದೇ ಮೊದಲ ಬಾರಿಗೆ ಬ್ರೈಲ್ ಲಿಪಿಯುಳ್ಳ ಚುನಾವಣಾ ಗುರುತಿನ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ರಾಷ್ಟ್ರೀಯ ಮತದಾರರ ದಿನಾಚರಣೆಯ ಮಹತ್ವ ಕುರಿತು ಪ್ರೌಢಶಾಲೆ, ಪಿ.ಯು, ಪದವಿ ಹಾಗೂ ಪಾಲಿಟೆಕ್ನಿನಿಕ್ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಕಾರ್ಯ ನಿರ್ವಹಿಸಿದ ಮತಗಟ್ಟೆ (ಬಿಎಲ್‍ಒ) ಅಧಿಕಾರಿಗಳನ್ನು ಗೌರವಿಸಲಾಯಿತು.

ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು. ಉಪ ವಿಭಾಗಧಿಕಾರಿ ಟಿ.ಜವರೇಗೌಡ ಸ್ವಾಗತಿಸಿದರು. ಸಂತ ಮೈಕಲರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಗೀತೆ, ನಾಡಗೀತೆ ಹಾಡಿದರು. ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಜೆ.ದಿವಾಕರ ನಿರೂಪಿಸಿ, ವಂದಿಸಿದರು.