ಮಡಿಕೇರಿ, ಜ. 25: ಪ್ರಕೃತ್ತಿ ವಿಕೋಪ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾರ್ಯ ವಿಳಂಬಕ್ಕೆ ಜಿಲ್ಲೆಯ ಶಾಸಕತ್ರಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಕಳೆದುಕೊಂಡವರಿಗೆ ಮಳೆಗಾಲ ಆರಂಭಕ್ಕೂ ಮುನ್ನವೇ ಮನೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಆಸಕ್ತಿ ವಹಿಸಿಲ್ಲ, ಆಸ್ತಿ ಕಳೆದುಕೊಂಡವರಿಗೆ ಬದಲೀ ವ್ಯವಸ್ಥೆ ಕೂಡ ಆಗಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಕೊಡಗೂ ಸೇರಿದಂತೆ ಹಲವಾರು ಜಿಲ್ಲೆಗಳನ್ನು ರಾಜ್ಯ ಸಮ್ಮಿಶ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಎಲ್ಲಾ ರೀತಿಯ ಭರವಸೆಯನ್ನು ಪ್ರಾರಂಭದಲ್ಲಿ ನೀಡಿದ್ದ ಸರ್ಕಾರ ಈಗ ಸಂತ್ರಸ್ತರಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಕೊಡಗಿನ ಸಂಕಷ್ಟ ಸ್ಥಿತಿಗೆ ಮರುಗಿದ ಜಗತ್ತಿನಾದ್ಯಂತಲಿನ ಜನ ಮುಖ್ಯಮಂತ್ರಿಗಳ ಪರಿಹಾರ ಖಾತೆಗೆಂದೇ ರೂ. 200 ಕೋಟಿ ನೆರವು ನೀಡಿದ್ದಾರೆ. ಈ ನೆರವನ್ನು ಸಕಾಲಿಕವಾಗಿ ಮತ್ತು ಸಮರ್ಥ ರೀತಿಯಲ್ಲಿ ಬಳಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದ ಬೋಪಯ್ಯ, ಈಗಿನ ಪರಿಸ್ಥಿತಿಯಲ್ಲಿ ತಿಂಗಳಿಗೆ 50 ಮನೆಗಳಂತೆ 800 ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಎಷ್ಟು ವರ್ಷಗಳು ಬೇಕಾದೀತೆಂದು ಪ್ರಶ್ನಿಸಿದರು. ಆಸ್ತಿ ಕಳೆದುಕೊಂಡವರಿಗೆ ಬದಲೀ ಆಸ್ತಿ ನೀಡುವ ಪ್ರಯತ್ನವೂ ಆಗುತ್ತಿಲ್ಲ. ಕನಿಷ್ಟ 5-10 ಎಕರೆಯನ್ನಾದರೂ ನೀಡಿ ಎಂಬ ಮನವಿಗೂ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದ ಕೆ.ಜಿ. ಬೋಪಯ್ಯ, ಖಾಸಗಿಯವರು ಮನೆ ನಿರ್ಮಾಣಕ್ಕೆ ಮುಂದೆ ಬಂದರೂ ಅವರಿಗೂ ಸೂಕ್ತ ರೀತಿಯಲ್ಲಿ ಜಾಗ ಗುರುತಿಸದೇ ಸ್ಪಂದಿಸುತ್ತಿಲ್ಲ. ಇದೆಂಥ ವ್ಯವಸ್ಥೆ ಎಂದು ಪ್ರಶ್ನಿಸಿದರು.

ವರ್ಗಾವಣೆಗೆ ಮಾತ್ರ ಆಸಕ್ತಿ ತೋರುತ್ತಿರುವ ಸರ್ಕಾರ ವರ್ಗಾವಣೆ ದಂಧೆಗೆ ಹೆಸರುವಾಸಿಯಾಗಿದೆ ಎಂದು ಟೀಕಿಸಿದರು.

ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 200 ಕೋಟಿಗೂ ಮಿಕ್ಕಿ ಹಣ ಬಂದಿದೆ. ಈ ಪೈಕಿ ಸರ್ಕಾರಿ ನೌಕರರ ಸಂಘದಿಂದಲೇ ರೂ. 100 ಕೋಟಿ ಲಭಿಸಿದೆ. ಈ 100 ಕೋಟಿಯಲ್ಲಿಯೇ ಅಗತ್ಯವಿರುವ 800 ಮನೆಗಳನ್ನು ತಲಾ ರೂ. 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲು ಸಾಧ್ಯವಿದ್ದರೂ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದರು. ಕೂಡಲೇ ಸರ್ಕಾರ ಮನೆ ನಿರ್ಮಾಣ ಕಾಮಗಾರಿಯನ್ನು 3-4 ಗುತ್ತಿಗೆದಾರರಿಗೆ ನೀಡುವ ಮೂಲಕ ಪರಿಹಾರ ಕಾರ್ಯ ಚುರುಕುಗೊಳಿಸಬೇಕೆಂದು ಸಲಹೆ ನೀಡಿದರು.

ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಯಾಗಿದ್ದರೂ ಈವರೆಗೂ ಒಂದೇ ಒಂದು ಸಭೆ ನಡೆಸಿಲ್ಲ. ಮಳೆ ಹಾನಿಗೆ ಸಂಬಂಧಿಸಿದಂತೆ ಕೊಡಗಿಗೆ ಘೋಷಣೆಯಾಗಿರುವ ರೂ. 85 ಕೋಟಿ ಪೈಕಿ ಚಿಕ್ಕಾಸನ್ನೂ ಬಿಡುಗಡೆ ಮಾಡಿಲ್ಲ. ಕೊಡಗಿನ ಮರು ನಿರ್ಮಾಣಕ್ಕೆ ಕನಿಷ್ಟ ರೂ. 1000 ಕೋಟಿ ಬೇಕಾಗಿದ್ದರೂ ಚಿಕ್ಕಾಸನ್ನೂ ನೀಡದೇ ಈ ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಶಾಸಕರು ದೂರಿದರು. ಉಸ್ತುವಾರಿ ಸಚಿವರು ನಿದ್ರಾವಸ್ಥೆಯಲ್ಲಿದ್ದಾರೆಂದೂ ಶಾಸಕ ರಂಜನ್ ಟೀಕಿಸಿದರು.

ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪ್ರತಿಕ್ರಿಯಿಸಿ, ಸಂತ್ರಸ್ತರಿಗೆ ಸರ್ಕಾರ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ. ಜಂಬೂರಿನಲ್ಲಿ ಮುಖ್ಯಮಂತ್ರಿಗಳೇ ಕಳೆದ ತಿಂಗಳು ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರೂ ಅಲ್ಲಿಯೂ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲ. ಮದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪರಿಸ್ಥಿತಿ ಹೀಗಿರುವಾಗಲೇ ಜಿಲ್ಲೆಯಿಂದ ಹಿರಿಯ ಅಧಿಕಾರಿಗಳನ್ನು ವರ್ಗಾಯಿಸಿದ್ದು, ಸೂಕ್ತವಲ್ಲ. ಅಧಿಕಾರಿಗಳ ಕೊರತೆ ನಡುವೇ ಈಗಿರುವ ಅಧಿಕಾರಿ ವರ್ಗಕ್ಕೆ ಕೆಲಸದ ಒತ್ತಡ ಹೆಚ್ಚಾಗಿದೆ. ಇದರಿಂದಲೂ ಪರಿಹಾರ ಕಾಮಗಾರಿಗಳು ಜಿಲ್ಲೆಯಲ್ಲಿ ವಿಳಂಬವಾಗಿವೆ. ರಾಜಕೀಯ ಬೇಧವಿಲ್ಲದೇ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಸಂತ್ರಸ್ತರ ನೆರವಿಗೆ ಮುಂದಾಗಿದ್ದೇವೆ. ಹೀಗಿದ್ದರೂ ಸರ್ಕಾರ ನಿರೀಕ್ಷಿತ ವೇಗದಲ್ಲಿ ಪರಿಹಾರ ಕಾಮಗಾರಿ ಕೈಗೊಂಡಿಲ್ಲ ಎಂದು ಹೇಳಿದ ವೀಣಾ ಅಚ್ಚಯ್ಯ, ಶೀಘ್ರದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕೊಡಗಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಲಾಗುತ್ತದೆ ಎಂದು ಹೇಳಿದರು.