ಗಣರಾಜ್ಯೋತ್ಸವ : ದೆಹಲಿಯಲ್ಲಿ ಬಿಗಿ ಭದ್ರತೆ

ನವದೆಹಲಿ, ಜ. 25: ಗಣರಾಜ್ಯೋತ್ಸವದ ವೇಳೆ ವಿಧ್ವಂಸಕ ಕೃತ್ಯ ನಡೆಸಲು ಉಗ್ರಗಾಮಿ ಸಂಘಟನೆಗಳು ಪ್ಲಾನ್ ಮಾಡಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ದೆಹಲಿಯಲ್ಲಿ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೈಶ್ ಈ ಮೊಹಮ್ಮದ್ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಇಬ್ಬರು ಶಂಕಿತರನ್ನು ಭದ್ರತಾ ಪಡೆ ಬಂಧಿಸಿದೆ. ಗಣರಾಜ್ಯೋತ್ಸವ ದಿನ ಇಬ್ಬರು ವಿಧ್ವಂಸಕ ಕೃತ್ಯ ನಡೆಸಲು ಪ್ಲಾನ್ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದ ಹಿನ್ನೆಲೆ ರಾಜಧಾನಿಯಲ್ಲಿ ಟೈಟ್ ಸೆಕ್ಯೂರಿಟಿಯನ್ನು ಹಾಕಲಾಗಿದೆ. ಬಂಧನಕ್ಕೆ ಒಳಗಾದವರ ವಿಚಾರಣೆ ವೇಳೆ ಲಜ್ಪತ್ ನಗರ್ ಮಾರುಕಟ್ಟೆ, ಹಜ್ ಮಂದಿರ, ತುಕ್ರ್ಮನ್ ಗೇಟ್, ಇಂಡಿಯಾ ಗೇಟ್, ಐಜಿಎಲ್ ಗ್ಯಾಸ್ ಪೈಪ್‍ಲೈನ್ ಬಳಿ ಕೃತ್ಯ ಎಸಗಲು ಪ್ಲಾನ್ ಮಾಡಿದ್ದರು ಎಂದು ವರದಿಯಾಗಿದೆ. ಟ್ರಾಫಿಕ್ ಸಿಬ್ಬಂದಿ ಸೇರಿದಂತೆ ಒಟ್ಟು 25 ಸಾವಿರ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿ ಕ್ಯಾಮೆರಾದ ಜೊತೆ ಫೇಸ್ ರೆಕಗ್ನಿಷನ್ ಕ್ಯಾಮೆರಾ, ವಿರೋಧಿ ವಿಮಾನಗಳನ್ನು ಹೊಡೆಯಬಲ್ಲ ಗನ್ ತಂಡ, ಸ್ನೈಪರ್ಸ್ ತಂಡವನ್ನು ಬಳಸಲಾಗುತ್ತಿದೆ. ಪರೇಡ್ ನಡೆಯುವ 8 ಕಿ.ಮೀ. ಸುತ್ತ ಬಿಗಿಭದ್ರತೆಯನ್ನು ಏರ್ಪಡಿಸಲಾಗಿದೆ.

ಚುನಾವಣಾ ಕಾರ್ಯ : ಕರ್ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ

ಬೆಂಗಳೂರು, ಜ. 25: ರಾಜ್ಯದಲ್ಲಿ ನಡೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಅತ್ಯುತ್ತಮವಾಗಿ ನಿರ್ವಹಿಸಿದ ರಾಜ್ಯ ಕರ್ನಾಟಕ ಎಂದು ಭಾರತ ಚುನಾವಣಾ ಆಯೋಗ ಗುರುತಿಸಿ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟ್ರೀಯ ಮತದಾರರ ದಿನಾಚರಣೆ 2019 ರ ಅಂಗವಾಗಿ ಚುನಾವಣಾ ಆಯೋಗ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಂದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮಗಳು ಇಡೀ ದೇಶಕ್ಕೆ ಮಾದರಿಯಾಗಿತ್ತು. ಭಾರತ ಚುನಾವಣಾ ಆಯೋಗ ಮತದಾರರ ಜಾಗೃತಿಗಾಗಿ ಪುಸ್ತಕ ಬಿಡುಗಡೆ ಮಾಡಿ ಕೈಪಿಡಿಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಲಾಗಿತ್ತು. ಮತದಾನ ಮಾಡುವ ಕುರಿತು ಇವಿಎಮ್ ಮತ್ತು ವಿವಿಪ್ಯಾಟ್ ಮಾದರಿಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಿ ಜನರಿಗೆ ಬಳಸಿ ನೋಡಿ ಅನುಭವ ನೀಡುವ ಜಾಗೃತಿ ಕೈಗೊಂಡಿದ್ದು, ವಿಶೇಷವಾಗಿ ದಿವ್ಯಾಂಗ ಮತದಾರರು ಮತದಾನ ಮಾಡಲು ಮನೆಯಿಂದ, ಮತಗಟ್ಟೆಗೆ - ಮರಳಿ ಮನೆಗೆ ಬಿಡಲು ವಾಹನ ವ್ಯವಸ್ಥೆ ಮಾಡಲಾಗಿತ್ತು.

ಉದ್ಯಮಿ ನೀರವ್ ಮೋದಿ ಬಂಗ್ಲೆ ನೆಲಸಮ

ಮುಂಬೈ, ಜ. 25: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗೆ ರೂ. 13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ನೀರವ್ ಮೋದಿಗೆ ಸೇರಿದ ಮುಂಬೈನ ಆಲಿಬಾಗ್‍ನಲ್ಲಿರುವ ಬೀಚ್ ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ. ಅಲಿಬಾಗ್ ಎಸ್‍ಡಿಒ ಶಾರದ ಪವಾರ್ ನೇತೃತ್ವದಲ್ಲಿ ಬಂಗಲೆ ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಒಂದು ವಾರಗಳ ಕಾಲ ಬಂಗಲೆ ತೆರವುಗೊಳಿಸುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀರವ್ ಮೋದಿ ಈ ಬಂಗಲೆಯಲ್ಲಿ ಹಲವು ದೇಶ-ವಿದೇಶಗಳ ಪ್ರತಿಷ್ಠಿತ ವ್ಯಕ್ತಿಗಳಿಗೆ ಔತಣಕೂಟ ಆಯೋಜಿಸುತ್ತಿದ್ದರು ಎನ್ನಲಾಗಿದೆ. ಈ ಕಟ್ಟಡದ ಕುರಿತು ತನಿಖೆ ನಡೆಸಿದ್ದ ಆಲಿಗಢ ಜಿಲ್ಲಾಡಳಿತ ಇದು ಅಕ್ರಮ ನಿರ್ಮಾಣದ ಕಟ್ಟಡ ಎಂದು ಘೋಷಿಸಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ವಂಚಿಸಿದ್ದ ಪ್ರಕರಣದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈ ಕಟ್ಟಡವನ್ನು ಜಪ್ತಿ ಮಾಡಿತ್ತು. ಈ ಮನೆಯಲ್ಲಿದ್ದ ಬೆಲಬಾಳುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ ಈ ಕಟ್ಟಡವನ್ನು ಗುರುವಾರ ಆಲಿಗಢ ಜಿಲ್ಲಾಡಳಿತದ ವಶಕ್ಕೆ ಒಪ್ಪಿಸಿದೆ. ಈ ಕಟ್ಟಡವನ್ನು ಕೆಡವಲು ಜಾರಿ ನಿರ್ದೇಶನಾಲಯ ಒಂದು ತಿಂಗಳ ಹಿಂದೆಯೇ ಜಿಲ್ಲಾಡಳಿತಕ್ಕೆ ಅನುಮತಿ ನೀಡಿತ್ತು ಎನ್ನಲಾಗಿದೆ. ಅಧಿಕೃತ ದಾಖಲೆಗಳ ಪ್ರಕಾರ, ಒಟ್ಟು 70 ಸಾವಿರ ಚದರಡಿ ವಿಸ್ತೀರ್ಣದ ಜಾಗದಲ್ಲಿ 33 ಸಾವಿರ ಚದರಡಿಯಲ್ಲಿ 2009-10ರಲ್ಲಿ ಐಷಾರಾಮಿ ಬಂಗಲೆ ನಿರ್ಮಿಸಲಾಗಿದೆ.

ಚಿದಂಬರಂ ವಶಕ್ಕೆ ಪಡೆಯಲು ಸಿಬಿಐ ಸಿದ್ಧ

ನವದೆಹಲಿ, ಜ. 25: ಐಎನ್‍ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಅವರನ್ನು ವಶಕ್ಕೆ ಪಡೆದುಕೊಳ್ಳಲು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮುಂದಾಗಿದ್ದು, ಹೈಕೋರ್ಟ್‍ನಲ್ಲಿ ಮನವಿ ಸಲ್ಲಿಸಿವೆ. ಐಎನ್‍ಎಕ್ಸ್ ಮಾಧ್ಯಮ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಹಾಗೂ ಭ್ರಷ್ಟಾಚಾರದಲ್ಲಿ ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಾಧೀಶ ಸುನೀಲ್ ಗೌರ್ ಮುಂದೆ ನಡೆಯುತ್ತಿದೆ. ಈ ಸಂಬಂಧ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ನಿರೀಕ್ಷಣಾ ಜಾಮೀನು ಅರ್ಜಿ ಕುರಿತ ಮುಂದಿನ ಆದೇಶದವರೆಗೂ ಚಿದಂಬರಂ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆಯನ್ನು ಕೋರ್ಟ್ ಒದಗಿಸಿದೆ.

ಬಿಜೆಪಿ ಗಿಫ್ಟ್ : ಸಿಎಂ ಹೆಚ್‍ಡಿಕೆ ಆರೋಪ

ಬೆಂಗಳೂರು, ಜ. 25: ಬಿಜೆಪಿಯವರ ಆಪರೇಷನ್ ಕಮಲ ಇನ್ನೂ ಮುಂದುವರೆದಿದ್ದು, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯವರು ಆಮಿಷವೊಡ್ಡುವದನ್ನು ಇನ್ನೂ ನಿಲ್ಲಿಸಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಿನ್ನೆ ಸಹ ಕಾಂಗ್ರೆಸ್ ಶಾಸಕರೊಬ್ಬರಿಗೆ ಬಿಜೆಪಿ ಪ್ರಮುಖರು ಕರೆ ಮಾಡಿ, ದೊಡ್ಡ ಮೊತ್ತದ ಆಮಿಷವೊಡ್ಡಿದ್ದು, ಬಿಜೆಪಿ ಗಿಫ್ಟ್ ಮೊತ್ತ ಕೇಳಿದರೆ ಅಚ್ಚರಿಯಾಗುತ್ತದೆ. ನಿಮಗೆ ಗಿಫ್ಟ್ ಕಳುಹಿಸಬೇಕು, ಯಾವ ಜಾಗಕ್ಕೆ ಕಳುಹಿಸಲಿ ಎಂದು ಕಾಂಗ್ರೆಸ್ ಶಾಸಕರನ್ನು ಕೇಳಿದ್ದರು ಎಂದರು. ಬಿಜೆಪಿಯ ಆಮಿಷವನ್ನು ಕಾಂಗ್ರೆಸ್ ಶಾಸಕರು ನಿರಾಕರಿಸಿ, ತಮ್ಮ ಪಾಡಿಗೆ ತಮ್ಮನ್ನು ಕೆಲಸ ಮಾಡಲು ಬಿಡುವಂತೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ ಎಂದರು. ಬಿಜೆಪಿಯವರಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ಆ ಲೆಕ್ಕ ಕೇಳಿದರೆ ನೀವೇ ಆಶ್ಚರ್ಯಪಡುತ್ತೀರಾ ಎಂದು ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಅವರ ಈ ಹೇಳಿಕೆ ಹಲವು ಕುತೂಹಲ ಮತ್ತು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳ

ಮುಂಬೈ, ಜ. 25: ಸತತ ಮೂರನೇ ದಿನವೂ ಪೆಟ್ರೋಲ್ ದರ ಯಥಾ ಸ್ಥಿತಿ ಕಾಯ್ದುಕೊಂಡಿದ್ದು, ಡೀಸೆಲ್ ದರದಲ್ಲಿ ಶುಕ್ರವಾರ 10 ಪೈಸೆಯಷ್ಟು ಹೆಚ್ಚಳವಾಗಿದೆ. ದೈನಂದಿನ ತೈಲ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‍ಗೆ ರೂ. 73.61 ಇದ್ದು, ಪ್ರತೀ ಲೀಟರ್ ಡೀಸೆಲ್ ದರ ರೂ. 68.07 ಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ರೂ. 71.27 ಮತ್ತು ಡೀಸೆಲ್ ದರ ರೂ. 66 ಗಳಿಗೆ ಏರಿಕೆಯಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ದರ ರೂ. 73.99 ಮತ್ತು ಡೀಸೆಲ್ ದರ ರೂ. 69.62 ಇದ್ದು, ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಪೆಟ್ರೋಲ್ ದರ ರೂ. 73.36 ಮತ್ತು ಡೀಸೆಲ್ ದರ ರೂ. 67.78 ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ ರೂ. 76.90 ಮತ್ತು ಡೀಸೆಲ್ ದರ ರೂ. 69.11 ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‍ಗೆ ರೂ. 3798ಕ್ಕೆ ತಲಪಿದೆ.

ಗೋವಾ ಮೋಜಿಗೆ ದುಬಾರಿ ದಂಡ

ಪಣಜಿ, ಜ. 25: ಗೋವಾದ ಕಡಲ ತೀರಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಇನ್ನು ಮುಂದೆ ಮದ್ಯಪಾನ, ಅಡುಗೆ ಮಾಡುವದು ಮಾಡಿದರೆ ರೂ. 2,000 ದಿಂದ ರೂ. 10 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ಬೀಚ್‍ಗಳಲ್ಲಿ ಅಡುಗೆ ಮಾಡುವದನ್ನೂ ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಅಥವಾ ಅಡುಗೆ ಮಾಡಿದವರಿಗೆ ರೂ. 2,000 ದಂಡ ವಿಧಿಸುವ ಪ್ರಸ್ತಾವಕ್ಕೆ ಗೋವಾ ಸಚಿವ ಸಂಪುಟ ಅನುಮೋದನೆ ನೀಡಿದೆ. ದಂಡ ಕಟ್ಟಲು ವಿಫಲವಾದರೆ 3 ತಿಂಗಳ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ. ವ್ಯಾಪಾರಿ ತೆರಿಗೆ ಕಾಯ್ದೆ ತಿದ್ದುಪಡಿಯಲ್ಲಿ ಈ ಪ್ರಸ್ತಾವಗಳು ಸೇರಿವೆ. ಪರಿಸರವಾದಿಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರಕಾರ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿರುವದಾಗಿ ಪ್ರವಾಸೋದ್ಯಮ ಸಚಿವ ಮನೋಹರ ಅಜಗಾಂವಕರ ಮಾಹಿತಿ ನೀಡಿದ್ದಾರೆ. ದೊಡ್ಡ ಗುಂಪುಗಳಲ್ಲಿ ಬರುವ ಪ್ರವಾಸಿಗರು ಕಾನೂನು ಉಲ್ಲಂಘಿಸಿದರೆ ರೂ. 10,000 ದಂಡ ವಿಧಿಸಲಾಗುವದು.