ಗೋಣಿಕೊಪ್ಪ ವರದಿ, ಜ. 25 : ಎರಡನೇ ಹಂತದಲ್ಲಿ ಪ್ರಾಯೋಗಿಕವಾಗಿ ಹಂತವಾಗಿ ಗೋಣಿಕೊಪ್ಪದಲ್ಲಿ ಅನುಷ್ಠಾನಗೊಳಿಸಿರುವ ಏಕಮುಖ ಸಂಚಾರದ ಸಾಧಕ-ಬಾಧಕ ಅರಿಯಲು ಮತ್ತಷ್ಟು ಕಾಲಾವಕಾಶ ಬೇಕಾಗಿರುವದರಿಂದ ತಾ. 28 ರಂದು ಏಕಮುಖ ಸಂಚಾರ ವಿಚಾರವಾಗಿ ಆಯೊಜಿಸಿದ್ದ ಸಾರ್ವಜನಿಕ ಸಭೆಯನ್ನು ಮುಂದೂಡಲಾಗಿದೆ ಎಂದು ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ ತಿಳಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಎರಡನೇ ಹಂತವಾಗಿ ಜಾರಿಗೆ ಬಂದು 5 ದಿನಗಳಷ್ಟೆ ಆಗಿದೆ. ಇದರಿಂದ ಎಲ್ಲಾ ಹಂತದ ಸಾಧಕ, ಬಾಧಕ ಅರಿಯಲು ಆಗುವದಿಲ್ಲ. ಒಂದಷ್ಟು ಕಾಲಾವಕಾಶ ಬೇಕಿದೆ. ಇದರಂತೆ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಸಮಿತಿ ಕೂಡ ನಿರ್ಧಾರ ಕೈಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದೆ. ಫೆಬ್ರವರಿ 15ರ ನಂತರ ಸಭೆ ಕರೆದು ಎಲ್ಲಾ ವಿಚಾರವಾಗಿ ಚರ್ಚಿಸಿ ನಿರ್ಧರಿಸಲಾಗುವದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.