ಮಡಿಕೇರಿ, ಜ.25 : ಮಡಿಕೇರಿ ತಾಲೂಕಿನ ಅರೆಕಾಡು ವ್ಯಾಪ್ತಿಯ ಹೊಸ್ಕೇರಿ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯೊಂದು ಸ್ಥಾಪನೆಗೊಳ್ಳುವ ಯೋಜನೆ ಪ್ರಗತಿಯಲ್ಲಿದ್ದು, ಇದು ಗ್ರಾಮಕ್ಕೆ ಮಾರಕವಾಗಿದೆ ಎಂದು ಸೇವ್ ಹೊಸ್ಕೇರಿ ಸಂಘಟನೆ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಸಿ.ಪಿ.ಸುಭಾಷ್, ಹೊಸ್ಕೇರಿ ಗ್ರಾಮದಲ್ಲಿ ಸುಮಾರು 89 ಏಕರೆ ಕಾಫಿ ತೋಟವನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ದೆಹಲಿಯ ಖಾಸಗಿ ಸಂಸ್ಥೆಯೊಂದು ಅರ್ಜಿ ಸಲ್ಲಿಸಿದ್ದು, ಸ್ಥಳೀಯ ಗ್ರಾ.ಪಂ ಗ್ರಾಮಸ್ಥರ ಅಭಿಪ್ರಾಯಕ್ಕೆ ಗೌರವ ನೀಡದೆ ನಿರಾಪೇಕ್ಷಣ ಪತ್ರ ನೀಡಿದೆ ಎಂದು ಆರೋಪಿಸಿದರು.
ಸುಮಾರು ಎರಡು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದ ಪರಿಸರ ಶಾಲೆ ನಿರ್ಮಿಸುವ ಕುರಿತು ಖಾಸಗಿ ಸಂಸ್ಥೆ ಪ್ರಯತ್ನ ಮುಂದುವರೆಸಿದ್ದು, ಇದಕ್ಕೆ ಗ್ರಾಮಸ್ಥರ ತೀವ್ರ ವಿರೋಧವಿದೆ. ಆದರೂ ಗ್ರಾ.ಪಂ ಯೋಜನೆಯ ಪರವಾಗಿ ಕಾರ್ಯನಿರ್ವಹಿಸಿದ್ದು, ಇದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಲೆ ನಿರ್ಮಾಣಗೊಂಡ ನಂತರ ಸುಮಾರು ಐನೂರು ವಿದ್ಯಾರ್ಥಿಗಳು ಮತ್ತು ಐನೂರು ಮಂದಿ ಸಿಬ್ಬಂದಿಗಳು ತಂಗಲಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ ಪರಿಸರದ ಬಗ್ಗೆ ಕಾಳಜಿ ಇಟ್ಟು ಪರಿಸರ ಶಾಲೆ ನಿರ್ಮಿಸುವ ಕುರಿತು ಮಾಹಿತಿ ನೀಡಿದೆ. ಆದರೆ ಸುಮಾರು 89 ಏಕರೆ ಪ್ರದೇಶ ಭೂ ಪರಿವರ್ತನೆಯಾದರೆ ಕ್ರಮೇಣ ಸಂಸ್ಥೆ ಬೃಹತ್ ಕಟ್ಟಡಗಳನ್ನು ನಿರ್ಮಿಸದೆ ಇರಲು ಸಾಧ್ಯವಿಲ್ಲ.
ಕಳೆದ ಮಳೆಗಾಲದಲ್ಲಿ ಸಂಭವಿಸಿದ ಅನಾಹುತ ಮಾನವ ನಿರ್ಮಿತ ಎಂದು ವರದಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ಈ ಪ್ರದೇಶದಲ್ಲಿ ಕಟ್ಟಡಗಳು ನಿರ್ಮಾಣಗೊಂಡರೆ ಗ್ರಾಮದ ಮೇಲೆ ದುಷ್ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿದೆ ಎಂದು ಸುಭಾಷ್ ಆತಂಕ ವ್ಯಕ್ತಪಡಿಸಿದರು. ಈ ಶಾಲೆಯಿಂದ ಕೊಡಗು ಜಿಲ್ಲೆಗೆ ಯಾವದೇ ಪ್ರಯೋಜನವಿಲ್ಲ, ಬದಲಿಗೆ ಗ್ರಾಮಾಂತರ ಪ್ರದೇಶದ ಪರಿಸರಕ್ಕೂ ಹಾನಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಲ್ಲಚಂಡ ಚಂದನ್ ಅಪ್ಪಯ್ಯ ಮಾತನಾಡಿ ಪರಿಸರ ಕಾಳಜಿಯ ಶಿಕ್ಷಣ ಸಂಸ್ಥೆ ಇದಾಗಿದ್ದರೆ, ಐವತ್ತು ಏಕರೆ ಪ್ರದೇಶದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು ಯಾಕೆ ಎಂದು ಪ್ರಶ್ನಿಸಿದರು. ಹೊಸ್ಕೇರಿ ಸಣ್ಣ ಗ್ರಾಮವಾಗಿದ್ದು, ಈ ದೊಡ್ಡ ಯೋಜನೆಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯವನ್ನು ನೀಡಲೇಬೇಕಾಗುತ್ತದೆ. ಇದರಿಂದ ಗ್ರಾಮಕ್ಕೆ ಧಕ್ಕೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಟೋಳಿರ ಸನ್ನಿ ಸೋಮಣ್ಣ ಮಾತನಾಡಿ, ಈ ಶಿಕ್ಷಣ ಸಂಸ್ಥೆಯ ಸ್ಥಾಪನೆಯ ಹಿಂದೆ ಹಣ ಮಾಡುವ ಉದ್ದೇಶ ಅಡಗಿದೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ 2017 ರಿಂದಲೇ ಆಕ್ಷೇಪಣೆ ವ್ಯಕ್ತಪಡಿಸಿ ಮನವಿ ಪತ್ರ ಸಲ್ಲಿಸುತ್ತ ಬರಲಾಗಿದೆ. ಅಲ್ಲದೆ ಗ್ರಾ.ಪಂ ನಲ್ಲೂ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತ ಬರಲಾಗಿದೆ. ಆದರೆ ಯಾವದೇ ಸ್ಪಂದನೆ ದೊರೆತಿಲ್ಲವೆಂದು ಆರೋಪಿಸಿದರು.
ಮಂಡೇಪಂಡ ಕುಟ್ಟಣ್ಣ ಮಾತನಾಡಿ, ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಭೂಪರಿವರ್ತನೆಯ ಚಟುವಟಿಕೆಗಳು ನಡೆಯಲು ಸ್ಥಳೀಯ ಗ್ರಾ.ಪಂ ಸದಸ್ಯರುಗಳೆ ಕಾರಣ ಎಂದು ಆರೋಪಿಸಿದರು.ವಿಶೇಷ ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ನಿರಾಕ್ಷೇಪಣ ಪತ್ರ ನೀಡುವದಾಗಿ ಗ್ರಾ.ಪಂ ಭರವಸೆ ನೀಡಿತ್ತು. ಆದರೆ ಇದೀಗ ಯಾರ ಗಮನಕ್ಕೂ ತಾರದೆ ಸಂಸ್ಥೆಗೆ ನಿರಾಪೇಕ್ಷಣ ಪತ್ರವನ್ನು ಗ್ರಾ.ಪಂ ನೀಡಿದೆ ಎಂದು ಆರೋಪಿಸಿದರು.
ಯಾವದೇ ಕಾರಣಕ್ಕೂ ಹೊಸ್ಕೇರಿಯಲ್ಲಿ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲು ಅವಕಾಶ ನೀಡಬಾರದೆಂದು ಅವರು ಒತ್ತಾಯಿಸಿದರು. ಯೋಜನೆ ಪ್ರಗತಿಗೆ ಸಹಕರಿಸಿದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಕುಟ್ಟಣ್ಣ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಲ್ಲಚಂಡ ಬೋಪಣ್ಣ ಉಪಸ್ಥಿತರಿದ್ದರು.