ಗೋಣಿಕೊಪ್ಪ ವರದಿ, ಜ. 25: ಪಠ್ಯದ ಒತ್ತಡದಿಂದ ಹೊರ ಬಂದ ಪೊನ್ನಂಪೇಟೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮಕ್ಕಳ ಸಂತೆಯಲ್ಲಿ ವ್ಯಾಪಾರ ನಡೆಸಿ, ಪುಳಕಿತಗೊಂಡರು.

ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ದೊರೆಯುವ ಆಹಾರ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳು ರಾಸಾಯನಿಕ ಕಲಬೆರಕೆಯ ಆಹಾರದಿಂದ ದೂರವಿರಿ ಎಂಬ ಸಂದೇಶವನ್ನು ಸಾರಿದರು.

ತಮ್ಮದೇ ಆದ ತಂಡದಿಂದ ಅಂಗಡಿ ನಿರ್ಮಿಸಿ, ವಿಶೇಷ ಹೆಸರು ಹಾಕಿಕೊಂಡು ಮಕ್ಕಳು ವ್ಯಾಪಾರ ನಡೆಸಿದರು. ಸಮೀಪದ ಕಾಲೇಜು ವಿದ್ಯಾರ್ಥಿಗಳು, ಪೋಷಕರು, ಹಲವು ವಿದ್ಯಾರ್ಥಿಗಳು ಗ್ರಾಹಕರಾಗಿ ವ್ಯಾಪಾರ ನಡೆಸಿದರು. ಶಾಲಾ ಆವರಣ ಮಾರುಕಟ್ಟೆ ವಾತಾವರಣ ಸೃಷ್ಟಿಸಿತ್ತು.

ಶುಕ್ರವಾರ ಬೆಳಿಗ್ಗೆಯಿಂದಲೇ ಆವರಣದಲ್ಲಿ ಮಾರುಕಟ್ಟೆಯಂತೆ ಮಳಿಗೆಗಳನ್ನು ತೆರೆಯಲಾಗಿತ್ತು. ಹಳ್ಳಿಮನೆ, ಟಾಮ್ಸ್ ಶಾಪ್, ಹಣ್ಣಿನ ಅಂಗಡಿ, ಜ್ಯೂಸ್ ಸೆಂಟರ್, ಹೀಗೆ ಹಲವು ಹೆಸರಿನ ಮೂಲಕ ಅಂಗಡಿ ತೆರೆದು ಗ್ರಾಹಕರನ್ನು ಸೆಳೆದರು.

ಪಠ್ಯದ ಒತ್ತಡದ ನಡುವೆ ವಿದ್ಯಾರ್ಥಿಗಳು ವ್ಯಾಪಾರ, ಮಾರಾಟ ಎಂದು ಸಂಭ್ರಮಿಸಿದರು. ಅವರವರು ಸಂಗ್ರಹಿಸಿದ್ದ ವಸ್ತುಗಳನ್ನು ಮಾರಾಟ ಮಾಡುವ ಅವಸರದಲ್ಲಿ ಗ್ರಾಹಕರನ್ನು ಕೂಗಿ ಕೂಗಿ ಕರೆದು ವ್ಯಾಪಾರ ನಡೆಸಿದರು.

ಪ್ರಸ್ತುತ ಮಾರುಕಟ್ಟೆಯಲ್ಲಿ ದೊರೆಯುವ ಕಲಬೆರಕೆ ಆಹಾರ ವಸ್ತುಗಳಿಂದ ದೂರ ಉಳಿಯುವಂತೆ ಇಲ್ಲಿ ಗ್ರಾಮೀಣ ಮಟ್ಟದಲ್ಲಿ ದೊರೆಯುವ ವಸ್ತುಗಳನ್ನು ಹೆಚ್ಚಾಗಿ ಮಾರಾಟಕ್ಕೆ ಇಟ್ಟಿದ್ದರು. ಚಕ್ಕೋತ, ಬಾಳೆ, ಬಾಳೆ ದಿಂಡು, ಬಾಳೆ ಕೊಂಬೆ, ತೆಂಗಿನ ಕಾಯಿ, ಎಳನೀರು, ಹಣ್ಣಿನ ಪಾನಕ, ಹೊಳೆ ದಂಡೆಯಲ್ಲಿ ದೊರೆಯುವ ತೆರ್ಮೆ ಸೊಪ್ಪು, ಕಾಕೆ ಸೊಪ್ಪು, ಕೊಳಿಕೆ ಸೊಪ್ಪು, ಕರಿಬೇವಿನ ಸೊಪ್ಪು ಇಂತಹವುಗಳನ್ನು ಮಾರಾಟ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂಬ ಸಂದೇಶ ಸಾರಿದರು.

ಗೃಹ ತಯಾರಿಕೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಪೋಷಕರು ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹ ನೀಡಿದರು. ಮಕ್ಕಳಿಗೆ ಅಂಗಡಿಗಳಲ್ಲಿ ಚಿಲ್ಲರೆ ವ್ಯಾಪಾರ ನಡೆಸಲು ಹಣ ನೀಡುತ್ತಿದ್ದ ಪೋಷಕರು ಅವರೇ ಹಣ ತಂದು ಮಕ್ಕಳ ಸಂತೆಯಲ್ಲಿ ಗ್ರಾಹಕರಾದರು. ಮುಖ್ಯ ಶಿಕ್ಷಕಿ ಅಂದ್ರತಾ ಹಾಗೂ ಸಿಬ್ಬಂದಿ ಸಲಹೆ ನೀಡಿ ಪ್ರೋತ್ಸಾಹ ನೀಡಿದರು. - ಸುದ್ದಿಪುತ್ರ