*ಗೋಣಿಕೊಪ್ಪಲು, ಜ. 26 : ಶಿಕ್ಷಕರು ಎಷ್ಟೆ ಬೋದಿಸಿದರು ಪಠ್ಯಗಳು ಮನದಟ್ಟಾಗುವದಿಲ್ಲ ಎಂದು ಸ್ಥಳೀಯ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಅರುವತ್ತೋಕ್ಲು ಮೈಸೂರಮ್ಮ ನಗರದ ನಿವಾಸಿ ಶ್ರೀನಿವಾಸ, ರಾಣಿ ದಂಪತಿಯ ಎರಡನೇ ಪುತ್ರಿ ದರ್ಶಿನಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ.

ಕಾವೇರಿ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ದರ್ಶಿನಿ ಮೈಸೂರಮ್ಮ ನಗರದ ತಮ್ಮ ಬಾಡಿಗೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ತನ್ನ ಚೂಡಿದಾರ್ ವೇಲಿನಿಂದ ನೇಣು ಬಿಗಿದುಕೊಂಡಿದ್ದಾಳೆ. ಎಸ್.ಎಸ್.ಎಲ್.ಸಿ.ಯಲ್ಲಿ 472 ಅಂಕಗಳನ್ನು ಪಡೆದುಕೊಂಡ ಈಕೆ ಪಿಯುಸಿಯಲ್ಲಿ ಪೂರ್ವಭಾವಿ ಪರೀಕ್ಷೆ ಮುಗಿಸಿದ್ದಳು. ಶನಿವಾರ ನಾನು ಕಾಲೇಜಿಗೆ ಬರುವದಿಲ್ಲ ಎಂದು ಮನೆಯಲ್ಲೆ ಇದ್ದ ದರ್ಶಿನಿ ನೇಣುಬಿಗಿದುಕೊಂಡಿದ್ದಾಳೆ. ಕಾಲೇಜಿನಿಂದ ಮರಳಿ ಬಂದ ಅಕ್ಕ ಮನೆಯೊಳಗೆ ಹೋದಾಗ ತಂಗಿ ದರ್ಶಿನಿ ನೇಣುಬಿಗಿದು ಕೊಂಡಿರುವದು ತಿಳಿದು ಬಂದಿದೆ.

ಸಾಯುವ ಮೊದಲು ಈಕೆ ಮರಣ ಪತ್ರದಲ್ಲಿ ತನ್ನ ಸಾವಿಗೆ ತಾನೆ ಕಾರಣ ಸಂತೋಷದಿಂದ ಸಾಯುತ್ತಿರುವದಾಗಿ ಬರೆದುಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈಕೆಯ ಪೋಷಕರು ಮೂಲತಃ ಹರಿಹರ ಗ್ರಾಮದ ನಿವಾಸಿಯಾಗಿದ್ದು, ಕಳೆದ 20 ವರ್ಷಗಳಿಂದ ಮೈಸೂರಮ್ಮ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ತಂದೆ ಕೂಲಿ ಕಾರ್ಮಿಕರಾಗಿದ್ದು, ತಾಯಿ ಬೈಪಾಸ್ ರಸ್ತೆಯಲ್ಲಿರುವ ಬ್ಯಾಂಬಿನೊ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.