ಸೋಮವಾರಪೇಟೆ, ಜ.24: ರಾಜ್ಯ ಸರ್ಕಾರದಿಂದ ಜಾರಿಯಾಗಿರುವ ಅನ್ನಭಾಗ್ಯದ ಪಡಿತರಗಳನ್ನು ಪಡೆಯಲು ಗ್ರಾಹಕರು ತಿಂಗಳಿಗೆ 2 ಬಾರಿ ನ್ಯಾಯಬೆಲೆ ಅಂಗಡಿಗಳಿಗೆ ಅಲೆಯಬೇಕಿದ್ದು, ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದೀಗ ‘ತಲೆಗಿಂತ ಮುಂಡಾಸು ಭಾರ’ ಎಂಬಂತಾಗಿದೆ.ಪ್ರತಿ ತಿಂಗಳು ಬೆರಳಚ್ಚು ನೀಡಿಯೇ ಪಡಿತರ ಪಡೆಯಬೇಕೆಂಬ ಸರ್ಕಾರದ ಆದೇಶವನ್ನು ಕೆಲ ನ್ಯಾಯ ಬೆಲೆ ಅಂಗಡಿಗಳು ತಮಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಿಕೊಂಡಿದ್ದು, ಇವರುಗಳ ಅನುಕೂಲತೆಗಾಗಿ ಗ್ರಾಹಕರು ತೊಂದರೆಗೆ ಒಳಗಾಗುವಂತಾಗಿದೆ.
ಸರ್ಕಾರದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಅಕ್ಕಿ,
(ಮೊದಲ ಪುಟದಿಂದ) ಸೀಮೆ ಎಣ್ಣೆ, ತೊಗರಿ ಬೇಳೆಯನ್ನು ಪ್ರತಿ ತಿಂಗಳು ನೀಡಲಾಗುತ್ತಿದ್ದು, ಉಚಿತವಾಗಿ ದೊರಕುವ ಅಕ್ಕಿಯನ್ನು ಪಡೆಯಲು ಕೂಲಿ ಕಾರ್ಮಿಕರು 2 ದಿನ ತಮ್ಮ ಕೂಲಿ ಬಿಟ್ಟು ನ್ಯಾಯಬೆಲೆ ಅಂಗಡಿಯ ಎದುರು ಸಾಲುಗಟ್ಟಿ ನಿಲ್ಲುವಂತಾಗಿದೆ. ನ್ಯಾಯಬೆಲೆ ಅಂಗಡಿಗಳ ಈ ಕ್ರಮದಿಂದ ಗ್ರಾಹಕರು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸುವಂತಾಗಿದೆ.
ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಪ್ರತಿ ತಿಂಗಳು ಎರಡು ಬಾರಿ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಹಾನಗಲ್ಲು, ಚೌಡ್ಲು, ಹಂಡ್ಲಿ, ಅವರೆದಾಳು ಸೇರಿದಂತೆ ಇನ್ನಿತರ ಅಂಗಡಿಗಳಲ್ಲಿ ತಿಂಗಳ ಮೂರನೇ ವಾರದಲ್ಲಿ ಬೆರಳಚ್ಚು ನೀಡಿ, ತಿಂಗಳ ಕೊನೆಯ ವಾರ ಮತ್ತೊಮ್ಮೆ ನ್ಯಾಯಬೆಲೆ ಅಂಗಡಿಗೆ ತೆರಳಿ ಪಡಿತರ ಪಡೆಯಬೇಕಿದೆ. ಹೀಗಾಗಿ ಒಂದು ತಿಂಗಳ ಪಡಿತರಕ್ಕೆ ಎರಡು ಬಾರಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಈ ಹಿಂದೆ ಓರ್ವ ಗ್ರಾಹಕ ನಾಲ್ಕೈದು ಕುಟುಂಬದ ಪಡಿತರ ಚೀಟಿಯನ್ನು ಪಡೆದುಕೊಂಡು ಪಡಿತರ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದ ಹಿನ್ನೆಲೆ, ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲಪುತ್ತಿರಲಿಲ್ಲ. ಈ ಹಿನ್ನೆಲೆ ಸರ್ಕಾರದಿಂದ ನೀಡಲ್ಪಡುವ ಅನ್ನಭಾಗ್ಯ ಯೋಜನೆ ಸಮರ್ಪಕವಾಗಲೆಂದು ಇಲಾಖೆಯೇ ಬೆರಳಚ್ಚು ನೀಡುವದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಇದರಿಂದಾಗಿ ಓರ್ವ ಗ್ರಾಹಕ ತನ್ನ ಕುಟುಂಬದ ಪಡಿತರವನ್ನು ಮಾತ್ರ ಪಡೆಯಲು ಅವಕಾಶವಿದ್ದು, ಈ ಹಿಂದೆ ಆಗುತ್ತಿದ್ದಂತಹ ಪಡಿತರ ದುರ್ಬಳಕೆಗೆ ತಡೆಬಿದ್ದಿದೆ.
ಇಲಾಖೆಯಿಂದ ಬಂದಿರುವ ಆದೇಶದಲ್ಲಿ ಪ್ರತಿ ತಿಂಗಳು 1 ನೇ ತಾರೀಕಿನಿಂದ 30ನೇ ತಾರೀಕಿನವರೆಗೆ ಗ್ರಾಹಕರಿಂದ ಬೆರಳಚ್ಚು ಪಡೆದು, ತಕ್ಷಣ ಪಡಿತರವನ್ನು ವಿತರಿಸಬೇಕು. ಇದಕ್ಕಾಗಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್‍ನೆಟ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಂಗಡಿಗಳ ವಾರಸುದಾರರಿಗೆ ಸೂಚಿಸಲಾಗಿದೆ.
ಆದರೆ ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳು ಈ ಆದೇಶದ ಹಿಂದಿನ ನೈಜಾಂಶವನ್ನು ಮರೆಮಾಚಿ, ಗ್ರಾಹಕರನ್ನು ಎರಡೆರಡು ಬಾರಿ ಅಲೆದಾಡಿಸುವ ಕಾರ್ಯ ನಡೆಸುತ್ತಿದೆ. ಪ್ರತಿ ತಿಂಗಳ ಪ್ರಾರಂಭದಿಂದ ಕೊನೆಯವರೆಗೂ ಪಡಿತರ ವಿತರಿಸಬೇಕೆಂಬ ಆದೇಶವನ್ನು ಗಾಳಿಗೆ ತೂರಲಾಗಿದ್ದು, ತಿಂಗಳ ಮೂರನೇ ವಾರದಲ್ಲಿ ಎಲ್ಲಾ ಗ್ರಾಹಕರಿಂದ ಬೆರಳಚ್ಚು ಪಡೆಯಲಾಗುತ್ತದೆ.
ಇದಕ್ಕಾಗಿ ಗ್ರಾಹಕರು ಕೆಲಸಕ್ಕೆ ರಜೆ ಮಾಡಿ ನ್ಯಾಯಬೆಲೆ ಅಂಗಡಿಗೆ ತೆರಳಿ ಬೆರಳಚ್ಚು ನೀಡಬೇಕಿದೆ. ಈ ಸಂದರ್ಭ ಟೋಕನ್ ನೀಡಲಾಗುತ್ತಿದ್ದು, ತಿಂಗಳ ಕೊನೆ ವಾರದಲ್ಲಿ ಮತ್ತೊಮ್ಮೆ ನ್ಯಾಯಬೆಲೆ ಅಂಗಡಿಗೆ ತೆರಳಿ ಟೋಕನ್ ನೀಡಿ ಪಡಿತರವನ್ನು ಪಡೆಯಬೇಕಿದೆ. ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ತಕ್ಷಣ ಈ ಕ್ರಮವನ್ನು ರದ್ದುಗೊಳಿಸಬೇಕೆಂದು ಗ್ರಾಹಕರುಗಳಾದ ಪ್ರೇಮ್‍ನಾಥ್, ಸುರೇಶ್, ತಿಮ್ಮಯ್ಯ, ಸಂತೋಷ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.
ಬೆರಳಚ್ಚು ಪಡೆಯುವ ಇಲಾಖೆಯ ನೂತನ ಕ್ರಮ ಹೊರಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅಚ್ಚುಕಟ್ಟಾಗಿ ಪಾಲನೆಯಾಗುತ್ತಿದ್ದು, ಗ್ರಾಹಕರಿಗೆ ತೊಂದರೆಯಾಗದಂತೆ ಪಡಿತರ ವಿತರಣೆಯಾಗುತ್ತಿದೆ. ಆದರೆ ಜಿಲ್ಲೆಯ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಇಂತಹ ಅವ್ಯವಸ್ಥೆಯಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳ ಮೂರನೇ ವಾರ ಬೆರಳಚ್ಚು ಪಡೆಯುತ್ತಿದ್ದು, ಒಮ್ಮೆಲೆ ಎಲ್ಲಾ ಗ್ರಾಹಕರು ಅಂಗಡಿಗೆ ಆಗಮಿಸುವದರಿಂದ ಸರತಿ ಸಾಲು ಅನಿವಾರ್ಯವಾಗಿದೆ. ಇದರೊಂದಿಗೆ ವಿದ್ಯುತ್ ಸ್ಥಗಿತಗೊಂಡರೆ, ಇಂಟರ್‍ನೆಟ್ ಸಮಸ್ಯೆ ಎದುರಾದರೆ ಬೆರಳಚ್ಚು ಪಡೆಯಲು ಅಸಾಧ್ಯವಾಗಿದ್ದು, ಮತ್ತೊಮ್ಮೆ ನ್ಯಾಯಬೆಲೆ ಅಂಗಡಿಗೆ ತೆರಳಬೇಕಿದೆ. ಸರ್ಕಾರದ ನಿಯಮವನ್ನು ಪರಿಣಾಮಕಾರಿ ಮತ್ತು ಯಥಾವತ್ ಜಾರಿಗೊಳಿಸಿದರೆ ಮಾತ್ರ ಗ್ರಾಹಕರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನ ಹರಿಸಬೇಕಿದೆ. -ವಿಜಯ್ ಹಾನಗಲ್