ಸೋಮವಾರಪೇಟೆ,ಜ.25: ಮಡಿಕೇರಿಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಖಾಸಗಿ ಬಸ್ ಹಾಗೂ ಬೆಂಗಳೂರಿನಿಂದ ಪಟ್ಟಣಕ್ಕೆ ಆಗಮಿಸಿ, ಇಲ್ಲಿಂದ ಮಾದಾಪುರ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಐವರು ಗಾಯಗೊಂಡಿರುವ ಘಟನೆ ಐಗೂರು ಸಮೀಪದ ಸಂಪಿಗೆಕೊಲ್ಲಿ ತಿರುವಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಗರ್ವಾಲೆ ಗ್ರಾಮದ ಐಮುಡಿಯಂಡ ಭೀಮಯ್ಯ, ಪತ್ನಿ ರೇಣು, ಪುತ್ರ ಅಜಿತ್ ಮತ್ತು ಕಾರ್ಯಪ್ಪ ಹಾಗೂ ಪತ್ನಿ ಚಿತ್ರ ಅವರುಗಳು ಗಾಯಗೊಂಡವರು. ಗಾಯಾಳುಗಳನ್ನು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗರ್ವಾಲೆ ಗ್ರಾಮದಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದ ಸಂದರ್ಭ, ಮಡಿಕೇರಿಯಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ರಾಘವೇಂದ್ರ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಹಾಗು ಬಸ್‍ನ ಮುಂಭಾಗ ಜಖಂಗೊಂಡಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.