ಮಡಿಕೇರಿ, ಜ. 24: ದೇಶದ ರಕ್ಷಣಾ ಪಡೆಯ ಪ್ರಪ್ರಥಮ ಹಾಗೂ ಏಕೈಕ ಮಹಾದಂಡನಾಯಕ ಕೊಡಗಿನ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನಾಚರಣೆಯ ದಿನವಾದ ತಾ. 28ಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಕಳೆದ ಹೆಲವು ವರ್ಷಗಳಿಂದ ಸರಕಾರಿ ಕಾರ್ಯಕ್ರಮವಾಗಿ ರೂಪುಗೊಂಡು ಆಚರಿಸಲ್ಪಡುತ್ತಿದ್ದ ಈ ಸೇನಾನಿಯ ಜನ್ಮದಿನಾಚರಣೆ ಕುರಿತಾಗಿ ಪ್ರಸಕ್ತ ವರ್ಷ ಸರಕಾರದಿಂದ ಈ ತನಕ ಇನ್ನೂ ಸ್ಪಷ್ಟ ನಿಲುವು ಹೊರಬಿದ್ದಿಲ್ಲ.
ಆರಂಭದ ಒಂದೆರಡು ವರ್ಷ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನಿಂದ ಶಿಸ್ತಿನ ಸೇನಾಧಿಕಾರಿಯ ಜನ್ಮ ದಿನಾಚರಣೆಯನ್ನು ಆಚರಿಸಲಾಗಿದ್ದು, ಬಳಿಕ ಸರಕಾರದ ಪಾಲ್ಗೊಳ್ಳುವಿಕೆಯೊಂದಿಗೆ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಇದನ್ನು ಸರಕಾರಿ ಕಾರ್ಯಕ್ರಮವಾಗಿ ತೀರ್ಮಾನಿಸಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷ ತಾ. 28 ರಂದು ಐದನೇ ವರ್ಷದ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕ್ರಿಯಾಯೋಜನೆಯಲ್ಲಿ ಈ ಕುರಿತಾಗಿ ಯಾವದೇ ಉಲ್ಲೇಖವಿರದಿರುವದು ಗೊಂದಲಕ್ಕೆ ಕಾರಣವಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜಿಲ್ಲಾಡಳಿತ ಅಥವಾ ಜಿಲ್ಲಾ ಕಚೇರಿಗೆ ಈ ತನಕ ಇದರ ಬಗ್ಗೆ ಯಾವೊಂದು ಸೂಚನೆಯನ್ನೂ ನೀಡಲಾಗಿಲ್ಲ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಇಲಾಖೆಯ ಮುಖ್ಯ ಕಚೇರಿಗೆ ಪತ್ರ ಬರೆದು ಕೆಲವು ದಿನಗಳಾದರೂ ಯಾವದೇ ಸೂಚನೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿಯಾಗಿರುವ ಲಕ್ಷ್ಮೀಪ್ರಿಯ ಅವರು ಒಂದೆರಡು ದಿನಗಳ ಹಿಂದೆ ಜಿಲ್ಲಾಡಳಿತ ಮೂಲಕ ಈ ಹಿಂದಿನ ವರದಿಗಳನ್ನು ಉಲ್ಲೇಖಿಸಿ ಪತ್ರ ಹಾಗೂ ಮೇಲ್ ಮೂಲಕ ಸ್ಪಷ್ಟನೆ ಕೇಳಿದ್ದಾರೆ. ಆದರೂ ಜ. 24ರವರೆಗೆ ಸರಕಾರದಿಂದ ಯಾವದೇ ನಿಲುವು ಪ್ರಕಟಗೊಂಡಿಲ್ಲ.
ಸರಕಾರಿ ಕಾರ್ಯಕ್ರಮವಾಗಿ ಆಚರಿಸಲ್ಪಡುತ್ತಿದ್ದ ದೇಶದ ರಕ್ಷಣಾ ಪಡೆಗಳ ಪಿತಾಮಹ ಎಂದು ಕರೆಸಿಕೊಂಡು ಗೌರವಿಸಲ್ಪಡುತ್ತಿರುವ ಕಾರ್ಯಪ್ಪ ಜಯಂತಿಯನ್ನು ಅವರ ತವರು ಜಿಲ್ಲೆಯಲ್ಲಿ ಆಚರಿಸಲು
(ಮೊದಲ ಪುಟದಿಂದ) ಸರಕಾರ ಹಾಗೂ ಇಲಾಖೆ ಈ ರೀತಿಯಲ್ಲಿ ಕಡೆಗಣನೆ ಮಾಡಿರುವ ಕುರಿತು ಫೀ.ಮಾ. ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂ ಸೇರಿದಂತೆ ಹಲವು ಸಂಘಟನೆಗಳು, ಅಸಮಾಧಾನ ವ್ಯಕ್ತಪಡಿಸಿವೆ. ಮಾತ್ರವಲ್ಲದೆ ಸರಕಾರದ ಮೂಲಕ ಜಯಂತಿ ಆಚರಿಸದಿದ್ದರೂ ಈ ಸಂಘಟನೆಗಳೇ ಸೇರಿ ವೀರ ಸೇನಾನಿಯ ಜನ್ಮದಿನವನ್ನು ಆಚರಿಸಲು ಸಿದ್ಧತೆ ನಡೆಯುತ್ತಿರುವದು ತಿಳಿದು ಬಂದಿದೆ. ಇಡೀ ಜಿಲ್ಲೆಯ ಜನರು ಬಯಸದ, ಸಾರ್ವತ್ರಿಕವಾಗಿ ವಿರೋಧವಿದ್ದ ಜಯಂತಿ ಆಚರಣೆಗೆ ತೀರಾ ಉತ್ಸುಕತೆ ತೋರಿದ್ದ ಸರಕಾರ ಈ ಬಗ್ಗೆ ಮೌನವಹಿಸಿರುವ ಬಗ್ಗೆ ಆಕ್ಷೇಪಗಳು ಕೇಳಿ ಬಂದಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಫೋರಂ ಅಧ್ಯಕ್ಷ ಕರ್ನಲ್ ಸುಬ್ಬಯ್ಯ ಅವರು ತಾ. 28 ರಂದು ಮಡಿಕೇರಿಯಲ್ಲಿರುವ ಕಾರ್ಯಪ್ಪ ಪ್ರತಿಮೆ ಎದುರು ಈ ಬಾರಿ ಸರಳವಾಗಿಯಾದರೂ ಜಯಂತಿ ಆಚರಿಸುವ ಮೂಲಕ ಗೌರವ ನಮನ ಸಲ್ಲಿಸಲು ತೀರ್ಮಾನಿಸಲಾಗಿದೆ. ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾರ್ಯಪ್ಪ ಅವರನ್ನು ಗೌರವಿಸುವ ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.
ಮಡಿಕೇರಿ ಕೊಡವ ಸಮಾಜದಿಂದಲೂ ಆಕ್ಷೇಪ
ಸಾರ್ವತ್ರಿಕ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಬಲಾತ್ಕಾರವಾಗಿ ಆಚರಿಸಿರುವ ಸರಕಾರ ರಾಷ್ಟ್ರ ಮಾತ್ರವಲ್ಲದೆ ವಿದೇಶಗಳಿಂದಲೂ ಗೌರವಿಸಲ್ಪಡುವ ವ್ಯಕ್ತಿಯಾದ ಕಾರ್ಯಪ್ಪ ಅವರ ಜಯಂತಿ ಆಚರಣೆಗೆ ಇಷ್ಟೊಂದು ನಿರ್ಲಕ್ಷ್ಯ ತೋರುತ್ತಿರುವದರ ಉದ್ದೇಶವಾದರೂ ಏನು ಎಂದು ಮಡಿಕೇರಿ ಕೊಡವ ಸಮಾಜ ಪ್ರಶ್ನಿಸಿದೆ. ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂತಹ ಕಡೆಗಣನೆಯನ್ನು ಸಮಾಜ ಖಂಡಿಸುತ್ತದೆ. ಎಂದಿದ್ದಾರಲ್ಲದೆ, ತಾ. 28ರ ಕಾರ್ಯಕ್ರಮಕ್ಕೆ ಬೆಂಬಲ ನೀಡಲಿದೆ. ಏಕಾಏಕಿ ಸರಕಾರ ಈ ರೀತಿಯಲ್ಲಿ ಮೌನವಹಿಸಿರುವದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಭರವಸೆ ದೊರೆತಿದೆ: ವೀಣಾ
ಕಾರ್ಯಪ್ಪ ಜನ್ಮದಿನಾಚರಣೆ ಕುರಿತಾಗಿ ಬೆಂಗಳೂರು ಮಟ್ಟದಲ್ಲಿ ಸಂಬಂಧಿಸಿದವರೊಂದಿಗೆ ವ್ಯವಹರಿಸಲಾಗಿದೆ. ಈ ಬಗ್ಗೆ ಸೂಕ್ತ ಸ್ಪಂದನೆಯ ಭರವಸೆ ದೊರೆತಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ತಿಳಿಸಿದ್ದಾರೆ.
ಉಸ್ತುವಾರಿ ಸಚಿವರಲ್ಲಿ ಪ್ರಶ್ನೆ : ಸುನಿಲ್
ಕಾರ್ಯಪ್ಪ ಅವರು ಇಡೀ ದೇಶ ಗುರುತಿಸುವ ವ್ಯಕ್ತಿಯಾಗಿದ್ದಾರೆ. ನಡೆದುಕೊಂಡು ಬರುತ್ತಿದ್ದ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ಖಂಡನೀಯವಾಗಿದೆ. ಈ ಬಗ್ಗೆ ತಾ. 26 ರಂದು ಜಿಲ್ಲೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಪ್ರಶ್ನಿಸುವದಾಗಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ತಿಳಿಸಿದ್ದಾರೆ.
ಈಗಾಗಲೇ ಆದೇಶ ಬರಬೇಕಿತ್ತು
ದೇಶದ ಪ್ರಥಮ ಮಹಾದಂಡ ನಾಯಕರಾಗಿದ್ದ ವ್ಯಕ್ತಿ ಕಾರ್ಯಪ್ಪ ಅವರಾಗಿದ್ದು, ಇವರ ಜಯಂತಿ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿದ್ಧತೆ ನಡೆಯಬೇಕಿತ್ತು. ಆದರೂ ವಿಳಂಬ, ನಿರ್ಲಕ್ಷ್ಯ ಧೋರಣೆ ಮಹಾ ಸೇನಾನಿಗೆ ಮಾಡುತ್ತಿರುವ ಅಪಮಾನವಾಗಿದ್ದು, ಈ ಬಗ್ಗೆ ಉಸ್ತುವಾರಿ ಸಚಿವರಲ್ಲಿ ಪ್ರಶ್ನಿಸುವದಾಗಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ನಿಲುವು ಖಂಡನೀಯ : ಬೋಪಯ್ಯ
ಸರಕಾರದ ಈ ನಿರ್ಲಕ್ಷ್ಯ ಖಂಡನೀಯ. ಇದು ಕೊಡಗಿನ ಸೇನಾನಿ ಮಾತ್ರವಲ್ಲ ದೇಶಕ್ಕೆ ಅವಮಾನದಂತಾಗಿದೆ. ರಾಜ್ಯದಲ್ಲಿ ಸರಕಾರದ ಕಾರ್ಯವೈಖರಿಗೆ ಇದುವೇ ಸಾಕ್ಷಿ, ಈ ಬಗ್ಗೆ ಇತ್ತೀಚೆಗೆ ಪತ್ರಿಕೆಯಲ್ಲಿ ವರದಿ ಬಂದ ದಿನದಂದೆ ಸಂಬಂಧಿಸಿದವರೊಂದಿಗೆ ಚರ್ಚಿಸಿದ್ದೇನೆ. ಆದರೂ ಸೂಕ್ತ ಸ್ಪಂದನ ದೊರೆತಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.