ಕೂಡಿಗೆ, ಜ. 24: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ದಲಿತರ ಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸದ ಹಿನ್ನೆಲೆಯಲ್ಲಿ ವಸತಿ ಮತ್ತು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಕುಶಾಲನಗರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಬ್ಯಾಡಗೊಟ್ಟ ಗ್ರಾಮಸ್ಥರು ಕೂಡಿಗೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಕುಶಾಲನಗರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಫ್ಸರ್ ಮಾತನಾಡಿ, ಮದಲಾಪುರ ಸಮೀಪದ ಬ್ಯಾಡಗೊಟ್ಟ ಗ್ರಾಮದ ದಲಿತ ವರ್ಗದ ನಿವಾಸಿಗಳ ಮನೆಗಳು ಹೀನಾಯ ಸ್ಥಿತಿಯಲ್ಲಿವೆ. ಸರ್ಕಾರದ ಯಾವದೇ ಅಭಿವೃದ್ಧಿ ಯೋಜನೆಗಳು ಸಹ ಈ ಗ್ರಾಮಕ್ಕೆ ತಲಪಿರುವದೇ ಇಲ್ಲ. ಈ ಕಾಲೋನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇಲ್ಲಿನ ನಿವಾಸಿಗಳು ಮನೆಗಳ ಹೆಂಚು ಇಲ್ಲದೆ, ಮನೆಯ ಮೇಲೆ ಹಾಗೂ ಸುತ್ತಲೂ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ರಸ್ತೆ ಸೌಕರ್ಯಗಳು ಇಲ್ಲದೆ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ದಲಿತ ವರ್ಗದ ನಿವಾಸಿಗಳ ಸ್ಥಿತಿಗಳನ್ನು ಖುದ್ದು ಪರಿಶೀಲಿಸಿ, ಮನೆಗಳ ದುರಸ್ತಿ ಕೆಲಸ ಹಾಗೂ ಈ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮತ್ತು ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭ ಸಂಘಟನೆಯ ಅಮೀನ್ ಮೊಹಿಸಿನ್, ಹೆಚ್.ಕೆ. ಮೊಣ್ಣಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರಾನ್ಸಿಸ್ ಡಿಸೋಜ, ಕ್ಯಾಂಪಸ್ ಫ್ರೆಂಟ್ ಆಫ್ ಇಂಡಿಯಾ ಅಧ್ಯಕ್ಷ ಅದ್ಬುಲ್ ಸಲಾಂ, ಎಸ್.ಡಿ.ಪಿ.ಐ. ನಗರಾಧ್ಯಕ್ಷ ಜೈನುಲಾಭಿದ್, ಪಿಎಫ್‍ಐನ ಜಿಲ್ಲಾಧ್ಯಕ್ಷ ಆರಿಫ್, ಮನೋಜ್, ಅರುಣ, ಸುಜಾತ, ಜಯ, ಸಣ್ಣಮ್ಮ, ಹೊನ್ನಮ್ಮ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.