ಮಡಿಕೇರಿ, ಜ. 24: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತಾ. 25 ರಂದು (ಇಂದು) ರಾಷ್ಟ್ರೀಯ ಮತದಾರರ ದಿವಸವನ್ನಾಗಿ ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ, ಗ್ರಾಮ ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಆಚರಿಸಬೇಕಿದ್ದು, ಈ ಸಂಬಂಧ ತಾ. 25 ರಂದು ಬೆಳಿಗ್ಗೆ 11 ಗಂಟೆಗೆ ಆಚರಿಸುವ ರಾಷ್ಟ್ರೀಯ ಮತದಾರರ ದಿನಾಚರಣೆಯ ದಿನದಂದು ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ರಾಷ್ಟ್ರೀಯ ಮತದಾರರ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿ ಪ್ರಜಾಪ್ರಭುತ್ವದಲ್ಲಿ ಮತದಾರರು ಭಾಗವಹಿಸಬೇಕು.

ಕೊಡಗು ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಮತ್ತು ಎಲ್ಲಾ ಶಾಲೆ-ಕಾಲೇಜುಗಳ ಮುಖ್ಯಸ್ಥರು ತಮ್ಮ ಕಚೇರಿಯಲ್ಲಿ ತಾ. 25 ರಂದು ಬೆಳಿಗ್ಗೆ 11 ಗಂಟೆಗೆ ಮತದಾರರ ಪ್ರತಿಜ್ಞಾವಿಧಿಯನ್ನು ತಮ್ಮ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳಿಗೆ ಸ್ವೀಕರಿಸುವ ಬಗ್ಗೆ ಕಾರ್ಯಕ್ರಮ ಏರ್ಪಡಿಸಬೇಕು.

ಜಿಲ್ಲಾಡಳಿತ ಭವನದಲ್ಲಿ, ಕೋಟೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳ, ತಾಲೂಕು ಕಚೇರಿ ಮಡಿಕೇರಿ ಮತ್ತು ನಗರಸಭೆ ಮಡಿಕೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಬೆಳಿಗ್ಗೆ 11 ಗಂಟೆಗೆ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.