ಕುಶಾಲನಗರ, ಜ. 24: ಕುಶಾಲನಗರದ ಅರಣ್ಯ ರಕ್ಷಕರ ತರಬೇತಿ ಕೇಂದ್ರದಲ್ಲಿ ಬೆಂಕಿ ನಿರ್ವಹಣಾ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಮತ್ತು ವೀಕ್ಷಕರಿಗೆ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿಗಳು ಬೆಂಕಿ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ ಒದಗಿಸಿದರು.
ಅಗ್ನಿಶಾಮಕ ದಳದ ಕುಶಾಲನಗರ ಠಾಣೆಯ ಸಹಾಯಕ ಠಾಣಾಧಿಕಾರಿ ಯು.ಬಿ. ರಾಜ ಗೋಪಾಲ್ ಈ ಕುರಿತು ಮಾಹಿತಿ ನೀಡಿ, ಬೇಸಿಗೆ ಸಮಯದಲ್ಲಿ ಹಲವೆಡೆ ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಗುತ್ತಿದೆ. ಕೇವಲ ಕಾಡ್ಗಿಚ್ಚಿನಿಂದ ಮಾತ್ರ ಅರಣ್ಯಕ್ಕೆ ಬೆಂಕಿ ತಗಲುವದಿಲ್ಲ. ಕೆಲವು ಕಿಡಿಗೇಡಿಗಳ ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬೀಳುತ್ತದೆ. ಬೇಸಿಗೆ ಸಮಯದಲ್ಲಿ ಅರಣ್ಯ ವ್ಯಾಪ್ತಿಗೆ ಪ್ರವಾಸಿಗರು, ಚಾರಣಿಗರ ಪ್ರವೇಶಕ್ಕೆ ನಿರ್ಭಂದ ಹೇರಬೇಕಿದೆ. ಕೆಲವು ಸಂದರ್ಭಗಳಲ್ಲಿ ಬೇಟೆಗಾರರಿಂದ ಕೂಡ ಅರಣ್ಯ ಬೆಂಕಿಗೆ ಆಹುತಿಯಾಗುತ್ತವೆ. ಅರಣ್ಯದ ಮೂಲಕ ಹಾದು ಹೋಗಿರುವ ವಿದ್ಯುತ್ ಮಾರ್ಗಗಳ ಘರ್ಷಣೆಯಿಂದ ಉಂಟಾಗುವ ಕಿಡಿ, ಟ್ರಾನ್ಸ್‍ಫಾರಂಗಳ ಕೆಳಗೆ ಹರಡಿರುವ ಕಸಕಡ್ಡಿಗಳಿಗೆ ಹೆಚ್ಚಿನ ವಿದ್ಯುತ್ ಪ್ರವಾಹದಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿದೆ. ಇವುಗಳ ಬಗ್ಗೆ ನಾವು ಸದಾ ಎಚ್ಚರವಹಿಸಬೇಕು. ಅರಣ್ಯಕ್ಕೆ ಬೆಂಕಿ ಬಿದ್ದ ಸಂದರ್ಭ ಸಾರ್ವಜನಿಕರು ಕೂಡ ಅರಣ್ಯ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಜೊತೆ ಶ್ರಮವಹಿಸುವ ಮೂಲಕ ತಮ್ಮ ಕರ್ತವ್ಯ ನಿಭಾಯಿಸುವ ಮೂಲಕ ಅರಣ್ಯವನ್ನು ಸಂರಕ್ಷಿಸಬೇಕು ಎಂದರು.
ಅಗ್ನಿಶಾಮಕ ಠಾಣೆ ಸಿಬ್ಬಂದಿ ಲತೇಶ್ ಮಾತನಾಡಿ, ಅರಣ್ಯಕ್ಕೆ ಬೆಂಕಿ ಬಿದ್ದ ಸಂದರ್ಭ ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಗಳು ಸಮರ್ಪಕ ಮಾಹಿತಿ ಒದಗಿಸಬೇಕಿದೆ. ಯಾವ ನಿರ್ದಿಷ್ಟ ಪ್ರದೇಶದಲ್ಲಿ ಬೆಂಕಿ ತಗುಲಿದೆ. ಯಾವ ಮಾರ್ಗಗಳಿಂದ ಆಗಮಿಸಿದರೆ ಸುಲಭವಾಗಿ, ವೇಗವಾಗಿ ಬೆಂಕಿ ನಂದಿಸಬಹುದು ಎಂಬ ಮಾಹಿತಿಗಳನ್ನು ನಿಖರವಾಗಿ ನೀಡಿದಲ್ಲಿ ಸಹಕಾರಿಯಾಗಲಿದೆ. ಕಾಡಿಗೆ ಬೆಂಕಿ ತಗಲದಂತೆ ಫೈರ್ ಲೈನ್‍ಗಳ ನಿರ್ಮಾಣ ಸೇರಿದಂತೆ ಬೆಂಕಿ ತಡೆಗಟ್ಟಲು ಸಾರ್ವಜನಿಕರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವದು ಅತ್ಯಗತ್ಯ ಎಂದರು. ನಂತರ ಬೆಂಕಿ ನಂದಿಸುವ ಪ್ರಾತ್ಯಕ್ರಿಕೆ ನಡೆಯಿತು. ಕಾರ್ಯಾಗಾರದಲ್ಲಿ ಡಿಎಫ್‍ಓ ಮಂಜುನಾಥ್, ಎಸಿಎಫ್‍ಗಳಾದ ಎಂ.ಎಸ್. ಚಿಣ್ಣಪ್ಪ, ಕೊಚ್ಚೇರ ನೆಹರು, ಎಂ. ಶಿವಪ್ಪ, ಆರ್‍ಎಫ್‍ಒಗಳಾದ ಸಿ.ಆರ್. ಅರುಣ್, ಲಕ್ಷ್ಮಿಕಾಂತ್, ಕೊಟ್ರೇಶ್ ಇದ್ದರು.