- ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಜ. 24: ಕಳೆದ 22 ವರ್ಷಗಳಿಂದ ನಿರಂತರವಾಗಿ ಕೊಡವ ಕೌಟುಂಬಿಕ ಹಾಕಿ ನಡೆಯುತ್ತಾ ಬರುತ್ತಿದೆ. ಆದರೆ ಪ್ರಸ್ತುತ ವರ್ಷ 2019 ರಲ್ಲಿ ನಡೆಯಬೇಕಾಗಿದ್ದ ಕೌಟುಂಬಿಕ ಹಾಕಿ ಹಬ್ಬ ಸ್ಥಗಿತಗೊಂಡಿದೆ. ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕಾರಣವನ್ನು ಮುಂದಿಟ್ಟು ಕೊಂಡು ಹಾಕಿ ಹಬ್ಬ ಸ್ಥಗಿತ ಗೊಂಡಿದೆ ಎಂಬದು ಆಯೋಜಕರ ಅಭಿಪ್ರಾಯ. ಪ್ರಕೃತಿ ವಿಕೋಪದ ನಂತರ ಕೊಡಗನ್ನು ಮತ್ತೆ ಹಿಂದಿನಂತೆಯೇ ಮಾರ್ಪಾಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪ್ರವಾಸೋಧ್ಯಮ ಇಲಾಖೆಯ ಮೂಲಕ ಜನವರಿ ತಿಂಗಳಿನಲ್ಲಿ ಮೂರು ದಿನಗಳ ಕಾಲ ಕೊಡಗಿನಲ್ಲಿ ಹಬ್ಬದ ವಾತಾವರಣವನ್ನು ತರುವ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇದರಿಂದ ಕೊಡಗಿನತ್ತ ರಾಜ್ಯದ ಮೂಲೆಮೂಲೆಯಿಂದಲೂ ಜನಸಾಗರ ಹರಿದು ಬಂದಿತ್ತು. ಈ ಕಾರ್ಯಕ್ಕೆ ಸರ್ಕಾರ ಕೋಟಿ ಹಣ ವಿನಿಯೋಗಿಸಿದೆ. ಪ್ಲವರ್ ಶೋ, ಶ್ವಾನ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಿಲ್ಲಾಡಳಿತ ಕೊಡಗು ಮೇಳ ಯಶಸ್ವಿಗೊಳಿಸುವಲ್ಲಿ ಸಫಲವಾಗಿದೆ.

ಅಕ್ಟೋಬರ್ ತಿಂಗಳಿನಲ್ಲಿ ಸರ್ಕಾರ ದಸರಾ ಆಚರಣೆ ನಡೆಸಲು ಅನುದಾನ ಸರ್ಕಾರ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಹಲವು ಜನಾಂಗದವರು ಈಗಾಗಲೇ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಯಶಸ್ವಿ ಕಾರ್ಯಕ್ರಮಗಳನ್ನು ಜನಾಂಗದ ಪರವಾಗಿ ನಡೆಸುತ್ತಲೇ ಬರುತ್ತಿದ್ದಾರೆ. ಆದರೆ ಕೊಡವ ಕೌಟುಂಬಿಕ ಹಾಕಿ ಹಬ್ಬ ನಡೆಸಲು ಆಯೋಜಕರು ಹಿಂದೇಟು ಹಾಕಿರುವ ಬಗ್ಗೆ ಹಾಕಿ ಪ್ರೇಮಿಗಳಿಗೆ ನಿರಾಶೆ ಹೊಂದಿದ್ದಾರೆ.

ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಗೆ ಕೊಡಗು ಜಿಲ್ಲೆಯಿಂದ ನಿರಂತರವಾಗಿ ಸುಮಾರು 60 ಕ್ರೀಡಾ ಪಟುಗಳನ್ನು ಭಾರತ ದೇಶಕ್ಕೆ ಕೊಟ್ಟ ಹೆಮ್ಮೆ ನಮ್ಮ ಕೊಡಗು ಜಿಲ್ಲೆಗಿದೆ. ಭಾರತದಲ್ಲಿ ಕೊಡಗು ಹಾಕಿಯ ಕ್ರೀಡಾಪಟುಗಳನ್ನು ತಯಾರು ಮಾಡುವ ಕಾರ್ಖಾನೆ ಎಂದೇ ಪರಿಗಣಿಸಲಾಗಿದೆ. ಇದುವರೆಗೆ ಕೊಡವ ಕೌಟುಂಬಿಕ ಹಾಕಿಗೆ 4 ಒಲಂಪಿಕ್ಸ್‍ನಲ್ಲಿ ಭಾಗವಹಿಸಿದ್ದ ಲೆಸ್ಲಿ ವಾಲ್ಟರ್, ಕ್ಲಾಡಿಯಸ್ ಧನರಾಜ್ ಪಿಳ್ಳೆ, ಸೋಮಯ್ಯ, ಅಶೋಕ್ ಕುಮಾರ್ (ದ್ಯಾನ್‍ಚಂದ್ ಮಗ) ಜೂಡ್ ಫಿಲಿಕ್ಸ್, ಗೋವಿಂದ, ಗಣೇಶ್, ಭಾಗವಹಿಸಿ ಹಾಕಿ ಕ್ರೀಡೆಗೆ ಉತ್ತೇಜನ ನೀಡಿದ್ದಾರೆ.

ಲಂಡನ್ ಒಲಂಪಿಕ್ಸ್‍ನ ಭಾರತ ತಂಡ ಕೊಡಗಿಗೆ ಆಗಮಿಸಿ ಪ್ರದರ್ಶನ ನೀಡಿದೆ. ಕೊಡಗಿನ ಸಿಡಿಲುಮರಿ ಖ್ಯಾತಿ ಪಡೆದ ಗೋವಿಂದ, ಇಂಡಿಯನ್ ಟೈಗರ್ ಗಣೇಶ್ ಭಾಗವಹಿಸಿದ್ದಾರೆ. ವಿಶ್ವದಲ್ಲಿ ಸಿಲ್ವರ್ ಸ್ಟಿಕ್ ಮತ್ತು ಸಿಲ್ವರ್ ಬಾಲ್‍ನಲ್ಲಿ ಉದ್ಘಾಟನೆಯಾಗುವ ಹಾಕಿ ಪಂದ್ಯಾವಳಿ ವಿಶ್ವದಲ್ಲಿ ಎಲ್ಲಿಯೂ ಕಂಡು ಬರುವದಿಲ್ಲ.

ಇದು ವರ್ಲ್ಡ್ ಬುಕ್ಸ್ ಆಫ್ ರೇಕಾರ್ಡ್, ಫಿಪಲ್ ಆಫ್ ಇಯರ್ ಅವಾರ್ಡ್, ಲಿಮ್ಕಾ ಬುಕ್ ಆಫ್ ರೇಕಾರ್ಡ್‍ನಲ್ಲಿ ಮತ್ತು ವರ್ಲ್ಡ್ ಗಿನ್ನಿಸ್ ದಾಖಲೆ ಸಮೀಪ ತಲಪಿದೆ. ಕೊಡಗಿನಲ್ಲಿ 856 ಕೊಡವ ಕುಟುಂಬಗಳಿದ್ದು, ಅವರದ್ದೇ ಆದ ತಾಂತ್ರಿಕ ಸಮಿತಿ, ತೀರ್ಪು ಗಾರರು, ವೀಕ್ಷಕ ವಿವರಣೆ ಗಾರರು, ಮೈದಾನ ಸಜ್ಜು ಗೊಳಿಸುವವರು ಸಾವಿರಾರು ಕ್ರೀಡಾಭಿಮಾನಿಗಳನ್ನು ಹೊಂದಿದ್ದಾರೆ.

ವಿಶ್ವದಲ್ಲಿ ಆಗುವಂತಹ ಹಾಕಿಯ ಆಗೂಹೋಗುಗಳ ಬಗ್ಗೆ ತಿಳಿಸುವ ಪ್ರಯತ್ನ ಕೌಟುಂಬಿಕ ಹಾಕಿಯಲ್ಲಿ ನಡೆಸಲಾಗುತ್ತಿದೆ. ಇದರಿಂದ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರುವ ಹಾಕಿ ಪ್ರೇಮಿಗಳಿಗೆ ಕ್ರೀಡೆಯ ಬಗ್ಗೆ ವಿವರಗಳು, ಬದಲಾವಣೆಯ ನಿಯಮಗಳು ಮನಮುಟ್ಟುವಂತೆ ತಿಳಿಸುವ ಪ್ರಯತ್ನಗಳು ನಡೆಯುತ್ತಲೇ ಬಂದಿವೆ.

ಇಷ್ಟೆಲ್ಲ ವ್ಯವಸ್ಥೆಗಳಿದ್ದರೂ ಈ ಭಾರಿ ಕೊಡವ ಕೌಟುಂಬಿಕ ಹಾಕಿ ಸ್ಥಗಿತಗೊಂಡಿರುವದರಿಂದ ಬೆಳೆಯುವ ಪೈರು ಮೊಳಕೆÀಯಲ್ಲಿ ಚಿವುಟಿದಂತಾಗಿದೆ. ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿವೆ.

1997ರಲ್ಲಿ ಕೌಟುಂಬಿಕ ಹಾಕಿಯ ಬೀಜವನ್ನು ಬಿತ್ತಿದವರಲ್ಲಿ ಪಾಂಡಂಡ ಕಾಶಿಯವರು ದಿವಂಗತರಾಗಿದ್ದು ಪಾಂಡಂಡ ಕುಟ್ಟಪ್ಪನವರು ಅನಾರೋಗ್ಯ ಕಾರಣದಿಂದ ಕಳೆದ ವರ್ಷ ನಾಪೋಕ್ಲುವಿನಲ್ಲಿ ನಡೆದ ಕುಲ್ಲೇಟೀರ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಕೊಡವ ಕೌಟುಂಬಿಕ ಹಾಕಿಯನ್ನು ಸತತ 22 ವರ್ಷಗಳಿಂದ ಲಕ್ಷ, ಕೋಟಿ ವೆಚ್ಚದಲ್ಲಿ ಹಣವನ್ನು ಖರ್ಚು ಮಾಡಿ ಯಶಸ್ವಿಗೊಳಿಸಿದ 22 ಕೊಡವ ಕುಟುಂಬಗಳಿಗೆ ನಿರೀಕ್ಷಿತ ಗೌರವಗಳು ಲಭ್ಯವಾಗುತ್ತಿಲ್ಲ. ಇಂತಹ ಸಮಸ್ಯೆಗಳು ಮುಂದೆ ಎದುರಾಗದಂತೆ ಮುಂದಿನ ಸಾಲಿನಿಂದ ಹಾಕಿ ಹಬ್ಬದ ಜವಾಬ್ದಾರಿಯನ್ನು ಬಾಳುಗೋಡು ವಿನಲ್ಲಿರುವ ಫೆಡರೇಶನ್ ಆಫ್ ಕೊಡವ ಸಮಾಜದ ಅಧೀನಕ್ಕೆ ವಹಿಸಿದ್ದಲ್ಲಿ ಸಮಾನತೆಯ ಹಾಕಿ ಹಬ್ಬ ಆಚರಿಸಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಪ್ರತಿ ವರ್ಷ ಕೊಡವ ಕೌಟುಂಬಿಕ ಹಾಕಿ ನಡೆಸುವ ಕುಟುಂಬ ಹಾಕಿ ಹಬ್ಬವನ್ನು ನಡೆಸಲು ಬೇಕಾದ ಹಣವನ್ನು ಫೆಡರೇಶನ್ ಆಫ್ ಕೊಡವ ಸಮಾಜಕ್ಕೆ ನೀಡಿದ್ದೇ ಆದಲ್ಲಿ ಪ್ರತಿ ವರ್ಷವೂ ಒಂದೇ ತರದ ಸಮಾನತೆಯ ಆಡಂಬರವಿಲ್ಲದಂತೆ ಹಾಕಿಯ ಏಳಿಗೆಗಾಗಿ, ಮುಂದಿನ ಪೀಳಿಗೆಗೆ ಹಾಕಿ ಜೀವಂತವಾಗಿರುವ ಹಾಗೆ ಮಾಡಬಹುದಾಗಿದೆ.

ಹಾಕಿ ಕೂರ್ಗ್, ಹಾಕಿ ಇಂಡಿಯಾ ಅಧೀನದಲ್ಲಿ ಅರ್ಹತೆ ಪಡೆದಿದ್ದು ಭಾರತದಲ್ಲಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಎಲ್ಲ ಹಾಕಿ ಪಂದ್ಯಾವಳಿ,ಜೂನಿಯರ್ಸ್ ಮತ್ತು ಸೀನಿಯರ್ಸ್ ಮಹಿಳೆಯರು, ಹಾಗೂ ಪುರುಷರ ಲೀಗ್ ಮ್ಯಾಚ್‍ಗಳು ಅತ್ಯುತ್ತಮವಾಗಿ ಹಾಕಿ ಕೂರ್ಗ್ ಆಯೋಜಿಸುತ್ತಾ ಬರುತ್ತಿದೆ.

ಕೊಡಗಿನಲ್ಲಿರುವ ಹಾಕಿ ಕ್ರೀಡಾ ಪಟುಗಳಿಗೆ ಸೀಮಿತಗೊಳಿಸಿ ಹಾಕಿ ಕೂರ್ಗ್‍ನಲ್ಲಿ ಆಡಲು ಅವಕಾಶ ಕೊಟ್ಟಲ್ಲಿ ಕೊಡಗಿನ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಒಂದು ವೇಳೆ ಪಂದ್ಯಾವಳಿಯಲ್ಲಿ ಸೋತರೂ ಭಾರತ ದೇಶವನ್ನು ಪ್ರತಿನಿಧಿಸಿದ ಹೆಮ್ಮೆ ನಮ್ಮ ಕೊಡಗಿನ ಹಾಕಿ ಕ್ರೀಡಾ ಪಟುಗಳಿಗೆ ಲಭಿಸುತ್ತದೆ.

ಕೊಡಗಿನ ಮಕ್ಕಳು ಮಾತ್ರ ಹಾಕಿ ಕೂರ್ಗ್‍ನಲ್ಲಿ ಭಾಗವಹಿಸುವಂತೆ ಆಗಬೇಕಾಗಿದೆ. ಭಾರತ ತಂಡದಲ್ಲಿ ಕೊಡಗಿನ ಹಾಕಿ ಆಟಗಾರರು ಇಲ್ಲದಿರುವದರಿಂದ ಪಂದ್ಯಾವಳಿ ಬಹಳ ಮಹತ್ವವನ್ನು ಪಡೆಯುತ್ತಿದೆ.

1975 ವರ್ಲ್ಡ್ ಕಫ್ ವಿನ್ನರ್ ಕಾಳಯ್ಯನವರು ಹಾಕಿ ಕೂರ್ಗ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು ಇದರಿಂದ ಹಾಕಿಗೆ ಹೆಚ್ಚಿನ ಗೌರವ ಲಭಿಸಿದಂತಾಗಿದೆ. 1980ರಲ್ಲಿ ಒಲಂಪಿಕ್ಸ್ ಚಿನ್ನ ಗೆದ್ದ ಸೋಮಯ್ಯ ಹಾಗೂ ಸುಬ್ಬಯ್ಯ, ಪೂಣಚ್ಚ, ಸುಬ್ರಮಣಿ,ಹಾಗೂ ಹಾಕಿ ಕೂರ್ಗ್‍ನ ಕಾರ್ಯದರ್ಶಿ ಅಂತರ್ರಾಷ್ಟ್ರೀಯ ಆಟಗಾರ ಚಂಗಪ್ಪ ಇಂತಹ ಮಹಾನಿಯರ ಅನುಭವ, ಸಲಹೆಗಳನ್ನು ಪಡೆದುಕೊಳ್ಳುವ ಪ್ರಯತ್ನ ಆಗಬೇಕಾಗಿದೆ.

ಪ್ರಸ್ತುತ ಸ್ಪೋಟ್ರ್ಸ್ ಅಥಾರಿಟಿ ಆಫ್ ಇಂಡಿಯಾ (SಂI) (ಆಙSS) ಇದರಲ್ಲಿ ಕೊಡಗಿನ ಮಕ್ಕಳ ಸಂಖ್ಯೆ ಕ್ಷೀಣಿಸಿದೆ. ಇತರ ಹತ್ತು ಜಿಲ್ಲೆಯ ಆಟಗಾರರು ಬೆಂಗಳೂರಿನಲ್ಲಿ ಸ್ಥಾನ ಪಡೆದಿದ್ದಾರೆ. ಕೊಡಗಿನ ಕ್ರೀಡಾಪಟುಗಳಿಗೆ ಅವಕಾಶ ಲಭ್ಯವಾಗುತ್ತಿಲ್ಲ. ಈ ಹಿಂದೆ ಹಾಕಿ ಆಡಿದಂತ ಆಟಗಾರರು ಹೊಸ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೈ ಜೋಡಿಸಬೇಕಾಗಿದೆ. ತಮ್ಮ ತಮ್ಮ ಗ್ರಾಮದಲ್ಲಿ ಎಳೆಯ ಹಾಕಿ ಪ್ರತಿಭೆಗಳಿಗೆ ತರಬೇತಿ ನೀಡುವ ಮೂಲಕ ಹಾಕಿ ಮತ್ತೆ ಚಿಗುರೊಡೆ ಯುವ ಕೆಲಸ ಮಾಡಬೇಕಾಗಿದೆ.

ಸುಮಾರು 15 ಏಕ್ರೆ ವಿಸ್ತ್ರೀರ್ಣದ ಫೆಡರೇಶನ್ ಆಫ್ ಕೊಡವ ಸಮಾಜ ಅಧೀನದಲ್ಲಿ ಎರಡು ಮೈದಾನವಿದ್ದು ಒಂದಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಮತ್ತೊಂದಕ್ಕೆ ಜನರಲ್ ತಿಮ್ಮಯ್ಯನವರ ಹೆಸರಿಟ್ಟು ನಾಮಕರಣ ಮಾಡಲಾಗಿದೆ. ಇದರಿಂದ ವೀರಾಸೇನಾನಿಗಳಿಗೆ ಕೊಡುವ ಗೌರವ ಹೆಚ್ಚಾದಂತಾಗಿದೆ.

ವೀರಯೋಧರ ಸ್ಮಾರಕ, ಕೊಡವ ಯೂನಿವರ್ಸ್ ಸಿಟಿ, ವಿವ್ ಪಾಯಿಂಟ್, ಬೆಂದುಬಿಡಾರ, ವ್ಯಾಯಾಮ ಕೇಂದ್ರ,ಸಾಂಕೇತಿಕ ಐನ್ ಮನೆ, ಕ್ರೀಡಾ ಶಾರೀರಿಕ ಕೇಂದ್ರ, ಸಂಬಾರಿಣಿ ತೋಟಗಳ ಕೆಲಸ ಪ್ರಗತಿಯಲ್ಲಿವೆ. ಪ್ರತಿ ವರ್ಷ ಕೊಡವ ಕೌಟುಂಬಿಕ ಹಾಕಿಯಲ್ಲಿ ಉಳಿದ ಹಣವನ್ನು ಸಂಗ್ರಹಿಸಿ ಹಾಕಿ ನಡೆಸಿದ ಕೊಡವ ಕುಟುಂಬದ ಹೆಸರಿನಲ್ಲಿ ಮೈದಾನದ ಸುತ್ತಲು ಫೆವಿಲಿಯನ್ ನಿರ್ಮಿಸುತ್ತ ಬಂದಲ್ಲಿ ಕುಟುಂಬದ ಹೆಸರು ಶಾಶ್ವತವಾಗಿ ಉಳಿಯಲಿದೆ.

ಈಗಾಗಲೇ ಈ ಬಗ್ಗೆ ಗಮನ ಹರಿಸಿದ್ದಲ್ಲಿ 22 ವರ್ಷ ಗಳಿಂದ ನಡೆಸುತ್ತಿದ್ದ ಕೌಟುಂಬಿಕ ಹಾಕಿ ಹೆಸರಿನಲ್ಲಿ ಸುಸ್ಸಜ್ಜಿತ ಗ್ಯಾಲರಿ ನಿರ್ಮಾಣವಾಗುತ್ತಿತ್ತೇನೋ.?

ಇಂತಹ ಕಾರ್ಯಗಳನ್ನು ಕೊಡಗಿನಲ್ಲಿ ಆರಂಭಿಸಿದ್ದಲ್ಲಿ ಮುಂದೊಂದು ದಿನ ಕೊಡಗಿನ ಕ್ರೀಡಾಪಟುಗಳು 11 ಒಲಿಂಪಿಯನ್ ಹಾಗೂ 11 ವರ್ಲ್ಡ್ ಕಪ್ ಆಟಗಾರರಾಗಿ ಕೊಡಗಿನಿಂದಲೇ ತಯಾರಾಗಬಹುದು.

ಈಗಾಗಲೇ ಕೌಟುಂಬಿಕ ಹಾಕಿಯಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿದ ಒಲಂಪಿಯನ್‍ಗಳಾದ ಚಿಯಣ್ಣ, ಉತ್ತಪ್ಪ, ನಿಕಿನ್ ಹಾಗೂ ತೀರ್ಪುಗಾರರಾದ ಅನುಪಮ ಹಾಗೂ ಕೀರ್ತಿ ಮುತ್ತಪ್ಪ ಇದಕ್ಕೆ ನಮ್ಮ ಮುಂದಿರುವ ಉದಾಹರಣೆ. ಕೊಡಗಿನ ಎಲ್ಲ ಕ್ರೀಡಾ ಪ್ರೇಮಿಗಳು ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ. 2019ರಲ್ಲಿ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಲು ಆಲೋಚಿಸಬೇಕಾಗಿದೆ.

ಮಾಹಿತಿ ಸಂಗ್ರಹ : ಚೆಪ್ಪುಡೀರ ಕಾರ್ಯಪ್ಪ, ಹಾಕಿ ತಜ್ಞ