ಮಡಿಕೇರಿ, ಜ.24 : ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಕೊಡಗು ಜಿಲ್ಲಾ ಸಮಿತಿ ವತಿಯಿಂದ ತಾ. 26 ರ ಗಣರಾಜ್ಯೋತ್ಸವ ದಿನ ಕುಶಾಲನಗರದಲ್ಲಿ 12ನೇ ವರ್ಷದ ಮಾನವ ಸರಪಳಿ ಮತ್ತು ಸರ್ವಧರ್ಮ ಸಮ್ಮೇಳನ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಕೆಎಸ್‍ಎಸ್‍ಎಫ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ.ಅಶ್ರಫ್ ಮಿಸ್ಬಾಹಿ ಶನಿವಾರದ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಪ್ರತಿವರ್ಷ ಗಣರಾಜ್ಯೋತ್ಸವದ ದಿನದಂದು ಶಾಂತಿ, ಸೌಹಾರ್ದತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತಿದ್ದು, ಈ ಬಾರಿ ಕುಶಾಲನಗರದ ಕಾರು ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮಿಜಿ, ಸೋಮವಾರಪೇಟೆ ಚರ್ಚ್‍ನ ಧರ್ಮಗುರುಗಳಾದ ಫಾದರ್ ಟೆನ್ನಿ ಕುರಿಯನ್ ಮತ್ತಿತರ ಪ್ರಮುಖರು ಮುಖ್ಯ ಭಾಷಣ ಮಾಡಲಿದ್ದಾರೆ. ಎಸ್‍ಕೆಎಸ್‍ಎಸ್‍ಎಫ್‍ನ ಜಿಲ್ಲಾಧ್ಯಕ್ಷ ನೌಶಾದ್ ಪೈಝಿ ಅವರು ಪ್ರತಿಜ್ಞಾ ವಿಧಿ ಭೋಧಿಸಲಿದ್ದಾರೆ. ಕೊಡಗು ಜಿಲ್ಲಾ ಸಮಸ್ತ ನಾಯಿಬ್ ಖಾಝಿ ಅಬ್ದುಲ್ಲ ಪೈಝಿ ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ವಿ.ಪಿ.ಎಸ್. ತಂಙಳ್, ಸುಂಟಿಕೊಪ್ಪ ಶರಿಯಾದ್ ಕಾಲೇಜುನ ಅಧ್ಯಕ್ಷ ಕೆ.ಎಂ. ಇಬ್ರಾಹಿಂ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅಶ್ರಫ್ ತಿಳಿಸಿದರು.

ಕುಶಾಲನಗರದ ದಾರುಲ್ ಉಲಾಮ್ ಮದ್ರಸದ ಸಮೀಪದಿಂದ ಮಾನವ ಸರಪಳಿಗೂ ಮೊದಲು ಕಾರು ನಿಲ್ದಾಣದವರೆಗೆ ಮೆರವಣಿಗೆ ನಡೆಯಲಿದೆ ಎಂದರು.

ಎಸ್.ಕೆ.ಎಸ್.ಎಸ್.ಎಫ್ ಕೇಂದ್ರ ಸಮಿತಿಯ ನಿರ್ದೇಶನದಂತೆ ಪ್ರತಿ ವರ್ಷ ಗಣರಾಜ್ಯೋತ್ಸವದ ಅಂಗವಾಗಿ “ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ” ಎಂಬ ಧ್ಯೇಯ ವಾಕ್ಯದೊಂದಿಗೆ ಮಾನವ ಸರಪಳಿ ಹಾಗೂ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.

ಕೇರಳದ 14 ಜಿಲ್ಲೆಗಳು, ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ, ಬೆಂಗಳೂರು, ಉಡುಪಿ, ಹಾಸನ, ಚಿಕ್ಕಮಂಗಳೂರು ಜಿಲ್ಲೆಗಳಲ್ಲೂ ತಾ. 26 ರಂದು ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಶಾಂತಿ, ಸೌಹಾರ್ದತೆಯನ್ನು ಕಾಪಾಡುವದು ಮತ್ತು ಕೋಮುವಾದದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ತಂಲೀಖ್ ದಾರಿಮಿ ಮಾತನಾಡಿ, ಸಂಘಟನೆಯು ಜನ ಜಾಗೃತಿ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕಳಕಳಿಯನ್ನು ಕೂಡ ಹೊಂದಿದ್ದು, ಕಳೆದ ವರ್ಷ ರೋಗಿಗಳಿಗೆ ಸುಮಾರು 4 ಲಕ್ಷ ರೂ. ಗಳಷ್ಟು ಧನ ಸಹಾಯ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ವೈ.ಎಮ್. ಉಮ್ಮರ್ ಫೈಝಿ, ರಾಜ್ಯ ಕಾರ್ಯದರ್ಶಿ ಆರಿಫ್ ಫೈಝಿ, ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಮಜೀದ್ ಹಾಗೂ ಸದಸ್ಯ ಉಸ್ಮಾನ್ ಉಪಸ್ಥಿತರಿದ್ದರು.