ಸಿದ್ದಾಪುರ, ಜ.24: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿರುವ ವಾಹನಗಳನ್ನು ಮರದೊಂದಿಗೆ ಅರಣ್ಯ ಇಲಾಖಾಧಿಕಾರಿಗಳು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗೋಣಿಕೊಪ್ಪಲುವಿನಿಂದ ಸಿದ್ದಾಪುರ ಮಾರ್ಗವಾಗಿ ಬೆಳಗ್ಗಿನ ಜಾವ 3 ಗಂಟೆಗೆ ತೆರಳುತ್ತಿದ್ದ ಕ್ರೈನ್ ಸೇರಿದಂತೆ ಒಟ್ಟು ಐದು ವಾಹನಗಳ ಸಹಿತ ಭಾರೀ ಮೌಲ್ಯದ ಹೆಬ್ಬಲಸು ಮರ ಸಾಗಾಟ ಮಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿ, ವಾಹನ ದೊಂದಿಗೆ ಮರಗಳನ್ನು ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳು ಕತ್ತಲೆಯಲ್ಲಿ ಪರಾರಿಯಾಗಿದ್ದು, ಅಕ್ರಮ ಮರ ಸಾಗಾಟಕ್ಕೆ ಬಳಸಿದ್ದ ಲಾರಿ ಕೆ.ಎ 01-ಎಇ 8973, ಕೆ.ಎ 21-9247, ಕೆ.ಎ 12-6804, ಕ್ರೈನ್ ಪಿ.ವೈ 01- 2025, ಸಾಂಟ್ರೋ ಕೆ.ಎ 03-ಎಂ.ಸಿ 692 ವಾಹನಗಳು ಹಾಗೂ ಮರದ ನಾಟಾಗಳು ಸೇರಿದಂತೆ ಒಟ್ಟು ಮೌಲ್ಯ 70 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಯಹುದಿಕೇರಿಯ ಸಲೀಂ ಸೇರಿದಂತೆ ಇತರರ ಮೇಲೆ ಅರಣ್ಯ ಇಲಾಖಾಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ತಾಲೂಕು ಡಿ.ಎಫ್.ಓ ಮರಿಯ ಕ್ರಿಸ್ತರಾಜ್ ಮಾರ್ಗದರ್ಶನ ದಲ್ಲಿ ಎ.ಸಿ.ಎಫ್ ರೋಶಿನಿ, ವಲಯ ಅರಣ್ಯಾಧಿಕಾರಿ ಗೋಪಾಲ್, ಉಪವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಆರ್.ಆರ್.ಟಿ ತಂಡದ ಮಂಜು, ಆದರ್ಶ್, ಸಲೀಂ, ಮುರುಘನ್, ವಿನು, ಅಶೋಕ, ಅರುಣ್, ಚಾಲಕ ಶರತ್ ಪಾಲ್ಗೊಂಡಿದ್ದರು.

-ಎ.ಎನ್ ವಾಸು