ಗೋಣಿಕೊಪ್ಪಲು, ಜ. 24: ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಸ್ವಾಮೀಜಿ ನಿಧನರಾದ ಹಿನ್ನೆಲೆ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸುವ ಮೂಲಕ ನುಡಿ ನಮನ ಸಲ್ಲಿಸಲಾಯಿತು. ಬಸ್ ನಿಲ್ದಾಣದಲ್ಲಿ ಸಿದ್ಧಗಂಗಾ ಕ್ಷೇತ್ರದ ಡಾ. ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು

ಜನತಾದಳದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಹಾಗೂ ಹಿರಿಯ ಉಪಾಧ್ಯಕ್ಷ ಬೋಜಪ್ಪನವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ವಿಶ್ವಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ, ಬ್ರಿಟೀಷರ ಕಾಲದಲ್ಲಿ ಬಿ.ಎ. ಪದವಿ ಮುಗಿಸಿ ಉತ್ತಮ ಉದ್ಯೋಗದ ಅವಕಾಶವಿದ್ದರೂ ಅದನ್ನೆಲ್ಲ ಬದಿಗೊತ್ತಿ ವಿಶ್ವದಲ್ಲೇ ನಡೆದಾಡುವ ದೇವಮಾನವರಾಗಿ ಅದರಲ್ಲೂ ಕನ್ನಡಾಭಿಮಾನಿಯಾಗಿ ಜಾತಿ, ಮತ, ಧರ್ಮಗಳ ಎಲ್ಲೆಯನ್ನು ಮೀರಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾಸೋಹ ನೀಡುವ ಮೂಲಕ ಜಗತ್ಪ್ರಸಿದ್ಧರಾದರು. ಸ್ವಾಮೀಜಿಯವರು ಮನುಕುಲಕ್ಕೆ ನೀಡಿದ ಕೊಡುಗೆಯನ್ನು ಮನಗಂಡು ‘ಭಾರತ ರತ್ನ’ ಬಿರುದು ಹಾಗೂ ವಿಶ್ವದಲ್ಲಿ ‘ನೋಬಲ್ ಪ್ರಶಸ್ತಿ’ ಘೋಷಣೆ ಆಗಬೇಕು. ಇದರಿಂದ ಭಾರತ ದೇಶದ ಕೋಟಿ ಜನಕ್ಕೆ ತೃಪ್ತಿ ತಂದಂತಾಗುತ್ತದೆ ಎಂದರು.

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿ, ಸ್ವಾಮೀಜಿಯವರ ನಿಧನವು ರಾಷ್ಟ್ರಕ್ಕೆ ತಂದ ನೋವಾಗಿದೆ. ಜಾತಿಯನ್ನು ಮೀರಿ ಸೇವೆ ನೀಡಿದ ಮಹಾನ್ ಪುರುಷರಾದ ಸ್ವಾಮೀಜಿಯವರು ಸದಾ ಜನರ ಬಳಿ ನಿರಂತರ ಒಡನಾಟವಿಟ್ಟು ನಿಸ್ವಾರ್ಥ ಸೇವೆ ಸಲ್ಲಿದವರು. ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂದೆ ಇವರಿಗೆ ರಾಷ್ಟ್ರ ಪ್ರಶಸ್ತಿ ನೀಡಲು ಸರ್ಕಾರ ಒತ್ತಾಯಿಸಬೇಕೆಂದು ಮನವಿ ಮಾಡಿದರು. ಹಿರಿಯ ಮುಖಂಡ ಆದೀಲ್ ಪಾಷಾ ಮಾತನಾಡಿ, ಇವರ ಸೇವೆ ಸ್ಮರಣೀಯ ಎಂದರು. ಜೆಡಿಎಸ್ ಮುಖಂಡರಾದ ಡೆನ್ನಿ ಬರೋಸ್, ಸುರೇಶ್ ಚಂಗಪ್ಪ, ಗ್ಲಾಡಿಯಸ್ ಲೋಬೋ, ಅಜಿತ್, ಸುನೀಲ್, ಕೆ.ಜಿ. ನಾಸೀರ್, ಲೀಲಾ ಶೇಷಮ್ಮ, ಸುರೇಂದ್ರ ಶೆಟ್ಟಿ, ಎಂ.ಇ.ಅಬ್ದುಲ್ ರೆಹಮಾನ್, ಮನ್ಸೂರ್ ಆಲಿ, ಆನಂದ್, ಎಸ್.ಹೆಚ್. ಮತೀನ್, ಸಂದೇಶ್, ಪಾಪಣ್ಣ ಸೇರಿದಂತೆ ಜಿಲ್ಲಾ, ತಾಲೂಕು ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಅನ್ನ ದಾಸೋಹ ನಡೆಸಲಾಯಿತು.