ಮಡಿಕೇರಿ, ಜ. 24: ಪ್ರಸಕ್ತ ಮಡಿಕೇರಿ ನಗರಸಭೆಯ ಆಡಳಿತ ಮಂಡಳಿ ಅಧಿಕಾರದ ಅವಧಿಯು ಬರುವ ಮಾರ್ಚ್ 15ಕ್ಕೆ ಪೂರ್ಣಗೊಳ್ಳಲಿದೆ. ಅಷ್ಟರೊಳಗೆ ನಡೆಯಬೇಕಿರುವ ಚುನಾವಣೆಗೆ ಇದೀಗ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪೋಂದರಿಂದ ತೂಗುಕತ್ತಿಯಂತೆ ಈ ಪ್ರಕ್ರಿಯೆ ಎದುರಾದಂತಿದೆ. ಇದಕ್ಕೆ ಸಾಕಷ್ಟು ಕಾರಣಗಳಿದ್ದು, ನ್ಯಾಯಾಲಯದಿಂದ ಹೊರಬಿದ್ದಿರುವ ಆದೇಶ ಕೂಡ ಅಚ್ಚರಿಗೆ ಎಡೆಮಾಡಿದಂತಿದೆ.ಮಡಿಕೇರಿ ನಗರಸಭೆ ಸೇರಿದಂತೆ ರಾಜ್ಯದ ಸುಮಾರು 15 ಸಿಎಂಸಿಗಳಿಂದ ಮೀಸಲಾತಿ ಗೊಂದಲ ಕುರಿತು ಒಂದಿಷ್ಟು ಅತೃಪ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲದೆ ಮತದಾರರ ಪಟ್ಟಿಯಲ್ಲಿನ ಲೋಪವನ್ನು ಕೂಡ ಪ್ರಶ್ನಿಸಿ ನ್ಯಾಯಕ್ಕಾಗಿ ಮೊರೆಯಿಟ್ಟಿದ್ದರು.ಈ ವೇಳೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡಿದ್ದ ನ್ಯಾಯಾಲಯದ ಏಕಸದಸ್ಯ ಪೀಠ, ಉಚ್ಚ ನ್ಯಾಯಾಲಯದಲ್ಲಿ ದೂರುಗಳನ್ನು ಆಲಿಸುವದರೊಂದಿಗೆ, ರಾಜ್ಯ ಸರಕಾರವು ಚುನಾವಣಾ ಆಯೋಗದೊಂದಿಗೆ ವ್ಯವಹರಿಸಿ, ಲೋಪಗಳನ್ನು ಸರಿಪಡಿಸುವ ಮೂಲಕ ತಾ. 28ರೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ. ಆ ಪ್ರಕಾರ ರಾಜ್ಯದ ಇತರೆಡೆಗಿಂತಲೂ ಮಡಿಕೇರಿ ನಗರಸಭೆ ಚುನಾವಣೆಗೆ ಕೇವಲ ಒಂದೂವರೆ ತಿಂಗಳ ಕಾಲಾವಧಿ ಲಭಿಸಲಿದ್ದು, ಅಷ್ಟರೊಳಗೆ ನ್ಯಾಯಾಲಯದಲ್ಲಿ ವಿವಾದ ಬಗೆಹರಿಯುವದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ವಾರ್ಡ್ ಗೊಂದಲ : ಇನ್ನೊಂದೆಡೆಯಲ್ಲಿ ಮಡಿಕೇರಿ ನಗರಸಭೆಯಲ್ಲಿ 23 ವಾರ್ಡ್‍ಗಳು ಇವೆಯಾದರೂ, ಈ ಹಿಂದಿನಂತೆ ವಾರ್ಡ್‍ಗಳು ಸಂಖ್ಯೆ ಹೊಂದಿರದೆ ಮೀಸಲಾತಿಯ ಜೊತೆಗೆ ಅಲ್ಲಿಯೂ ಗೊಂದಲ ಹುಟ್ಟಿಕೊಂಡಿದೆ. ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಿರುವಂತೆ ವಾರ್ಡ್ ಸಂಖ್ಯೆ 23 ಈ ತನಕ ಅಜಾದ್ ನಗರ ವ್ಯಾಪ್ತಿಯಾಗಿತ್ತು.

ಈ ಅಜಾದ್‍ನಗರ ಮೀಸಲು ಕ್ಷೇತ್ರದಲ್ಲಿ 2014ರಲ್ಲಿ ಬಿಸಿಎಂ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಪ್ರಸಕ್ತ ಈ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲುಗೊಳಿಸಿರುವ ಆದೇಶ ಸರಕಾರದಿಂದ ಹೊರಡಿಸಿರುವ ಸುತ್ತೋಲೆಯಲ್ಲಿದೆ. (ಮೊದಲ ಪುಟದಿಂದ) ಆದರೆ ಉಚ್ಚ ನ್ಯಾಯಾಲಯವು ಅಜಾದ್‍ನಗರ ವಾರ್ಡ್‍ನಲ್ಲಿ ಪ್ರಸಕ್ತ ಮರು ಮೀಸಲಾತಿಯಲ್ಲಿ ಹಿಂದಿನ ಚುನಾವಣೆಯಲ್ಲಿ ಮೀಸಲಿರಿಸಿದ್ದ ವರ್ಗಕ್ಕೆ ಮರು ಅವಕಾಶ ಕಲ್ಪಿಸಲಾಗಿದೆ ಎಂದು ಉಲ್ಲೇಖಿಸಿರುವದು ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಂತಾಗಿದೆ.

ಬದಲಾಗಿ 2018ರ ಜುಲೈ 31 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿರುವ ವಿಶೇಷ ಅಧಿಸೂಚನೆ ಪ್ರಕಾರ ನಗರದ ಅಶೋಕಪುರ ಹಾಗೂ ಸುತ್ತಮುತ್ತಲಿನ ಪ್ರದೇಶ ವಾರ್ಡ್ ಸಂಖ್ಯೆ 23 ಎಂದು ಪರಿಗಣಿಸಲಾಗಿದ್ದು, ಪರಿಶಿಷ್ಟ ಜಾತಿಗೆ ಮೀಸಲುಗೊಳಿಸಲಾಗಿದೆ. ಈ ಗೊಂದಲದ ಬಗ್ಗೆ ಸ್ಥಳೀಯರಾದ ಅಶ್ರಫ್ ಮತ್ತಿತರರು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ತೀರ್ಪು ಪ್ರಕಟಿಸದ ನ್ಯಾಯಾಲಯ ಪೀಠ ಮೇಲಿನ ಅಂಶವನ್ನು ಪಕ್ಕಕ್ಕಿರಿಸಿ, ಅಜಾದ್ ನಗರ ವಾರ್ಡ್ ಬಗ್ಗೆ ಉಲ್ಲೇಖಿಸಿರುವದು ಇಲ್ಲಿ ತೂಗುಕತ್ತಿಯಾಗಿ ಪರಿಣಮಿಸಿದೆ.

ಅಚ್ಚರಿಗೂ ಕಾರಣ : ಅಲ್ಲದೆ ಈ ತೀರ್ಪಿನಿಂದಾಗಿ, ಇದುವರೆಗೆ 23ನೇ ವಾರ್ಡ್ ಎಂದು ಪರಿಗಣಿಸಲಾಗಿದ್ದ ಅಜಾದ್‍ನಗರ ವ್ಯಾಪ್ತಿ, ಹೇಗೆ 4ನೇ ವಾರ್ಡ್ ಆಯಿತು? ಅಥವಾ ಹಿಂದಿನ ಅವಧಿಯಲ್ಲಿ 17ನೇ ವಾರ್ಡ್ ಇದ್ದ ಅಶೋಕಪುರ ವ್ಯಾಪ್ತಿಯ ಪ್ರದೇಶ ಈಗ 23ನೇ ವಾರ್ಡ್ ಹೇಗಾಯಿತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ವಾರ್ಡ್‍ಗಳ ಬದಲಾವಣೆ: ಈ ರೀತಿ ರಾಜ್ಯ ಸರಕಾರದಿಂದ ವಾರ್ಡ್ ಸಂಖ್ಯೆಯೊಂದಿಗೆ ಮತದಾರರ ಪಟ್ಟಿಯಲ್ಲಿ ಭಾರೀ ಗೊಂದಲದ ಕಾರಣ, ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದಿಷ್ಟು ಯುವ ಪ್ರಮುಖರು ಹಿಂಜರಿದರೆ, ಕೆಲವು ನಗರಸಭೆ ಸಿಬ್ಬಂದಿಯನ್ನು ಬಳಸಿಕೊಂಡು ಪಟ್ಟಭದ್ರ ಗುಂಪೊಂದು ವ್ಯವಸ್ಥಿತ ಪಿತೂರಿ ನಡೆಸಿದೆ ಎಂದು ಹಾಲಿ ಸದಸ್ಯ ಹೆಚ್.ಎಂ. ನಂದಕುಮಾರ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ವಾರ್ಡ್ ಸಂಖ್ಯೆ ಸಹಿತ ಮೀಸಲಾತಿ ಗೊಂದಲ ಪ್ರಶ್ನಿಸಿದ ಬಗ್ಗೆ ನ್ಯಾಯಾಲಯ ಕೂಡ ಗೊಂದಲದ ಆದೇಶ ಹೊರಡಿಸಿದೆ ಎಂದ ಅವರು, ಅಶೋಕಪುರ ಹಾಗೂ ಅಜಾದ್‍ನಗರ ಮೀಸಲಾತಿಯ ಉಲ್ಲೇಖವನ್ನು ಬೊಟ್ಟು ಮಾಡಿದ್ದಾರೆ.

ವಾರ್ಡ್ ಗೊಂದಲ : 2014ರ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ್ದ ವಾರ್ಡ್ ಸಂಖ್ಯೆ 14ರ ನಕಾಶೆ ಸಂಬಂಧ, ನಿವೃತ್ತ ತಹಶೀಲ್ದಾರರೊಬ್ಬರು ಜಿಲ್ಲಾಧಿಕಾರಿ ಬಳಿ ಸಲ್ಲಿಸಿದ್ದ ದೂರಿನ ಸಂಬಂಧ ವಾರ್ಡ್‍ಗಳ ಪುನರ್‍ವಿಂಗಡಣೆಗೆ ಈ ಹಿಂದೆಯೇ ನಿರ್ದೇಶನ ಲಭಿಸಿದ್ದಾಗಿ ಹಾಲಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಕಚೇರಿ ಮಾಹಿತಿ: ಆದರೆ ಜಿಲ್ಲಾ ಚುನಾವಣಾ ಕಚೇರಿ ಮೂಲಗಳ ಪ್ರಕಾರ, ಈ ಹಿಂದೆ 2001ರ ಜನಗಣತಿ ಆಧರಿಸಿ ಮಡಿಕೇರಿ ನಗರಸಭೆಯ ವಾರ್ಡ್‍ಗಳ ವಿಂಗಡಣೆಗೊಳಿಸಿದ್ದು, ಮೊದಲಿಗೆ 32 ವಾರ್ಡ್‍ಗಳನ್ನು ರಚಿಸಲಾಗಿತ್ತು. ಆ ಬಳಿಕ 23ಕ್ಕೆ ಇಳಿಕೆಗೊಂಡಿತ್ತು. ಪ್ರಸಕ್ತ 2011ರ ಜನಗಣತಿ ಆಧರಿಸಿ ವಾರ್ಡ್‍ಗಳ ಪುನರ್ ವಿಂಗಡಣೆಯಾಗಿದೆ ಎಂದು ಖಾತರಿಯಾಗಿದೆ.

ಹೀಗಾಗಿ ವಾರ್ಡ್‍ಗಳ ವ್ಯಾಪ್ತಿ ಹಾಗೂ ಕ್ರಮ ಸಂಖ್ಯೆ ಕೂಡ ಬದಲಾವಣೆಯಾಗಿದ್ದು, ಸರಕಾರದಿಂದ ಆಕ್ಷೇಪಣೆಗೂ ಅಧಿಸೂಚನೆ ಹೊರಡಿಸಿ, ಯಾವದೇ ಆಕ್ಷೇಪಣೆಗಳು ಸಲ್ಲಿಕೆ ಸಂಬಂಧ ಪರಿಶೀಲನೆ ಬಳಿಕ ಈಗಿನಂತೆ ಅಧಿಕೃತಗೊಳಿಸಲಾಗಿದೆ. ಈ ನಡುವೆ ಕೆಲವರು ನ್ಯಾಯಾಲಯದ ಮೆಟ್ಟಲೇರಿರುವ ಕಾರಣ ತಾ. 28 ರಂದು ಕೋರ್ಟ್ ನೀಡುವ ನಿರ್ದೇಶನದಂತೆ ಮುಂದಿನ ನಿರ್ಧಾರ ಗೊತ್ತಾಗಲಿದೆ.

ಹೀಗಾಗಿ ಪ್ರಸಕ್ತ ಕಾಲಾವಧಿಯಲ್ಲಿ ಚುನಾವಣೆ ನಡೆಯುವದು ಅಸಂಭವ ಎನ್ನುವ ಅಭಿಪ್ರಾಯ ಕೇಳಿಬರತೊಡಗಿದೆ. ಕಾರಣ ನ್ಯಾಯಾಲಯದ ಈಗಿನ ನಿರ್ದೇಶನದಂತೆ ಸರಕಾರವು ವಾರ್ಡ್‍ಗಳ ಪುನರ್‍ರಚನೆಗೆ ಮುಂದಾಗದೆ, ಮೇಲ್ಮನವಿ ಸಲ್ಲಿಸಲು ಆಸಕ್ತಿ ವಹಿಸಿದಂತಿದೆ. ಮಡಿಕೇರಿ ನಗರಸಭೆಯೂ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ತಯಾರಿ ನಡೆಸಿದೆ. ಆ ಕಾರಣ ಮಾರ್ಚ್ ಅಂತ್ಯದೊಳಗೆ ಚುನಾವಣೆ ನಡೆಯದೆ ಮುಂದೂಡಲ್ಪಡುವ ಸಾಧ್ಯತೆ ಇದೆ. ಈ ಎಲ್ಲಾ ಬೆಳವಣಿಗೆ ನಡುವೆ ಹಾಲಿ ನಗರಸಭಾ ಸದಸ್ಯರ ಸಹಿತ ಚುನಾವಣಾ ಆಕಾಂಕ್ಷಿಗಳು ಕಾದುನೋಡುವ ತಂತ್ರದೊಂದಿಗೆ ತಾ. 28ರಂದು ನ್ಯಾಯಾಲಯದಿಂದ ಹೊರಬೀಳುವ ಆದೇಶದತ್ತ ಚಿತ್ತಹರಿಸಿದ್ದಾರೆ.