ಕುಶಾಲನಗರ, ಜ. 24: ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪದ ಕಾವೇರಿ ನದಿ ತಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಹುಣ್ಣಿಮೆ ಅಂಗವಾಗಿ ನಡೆಯಲಿರುವ 90ನೇ ಮಹಾ ಆರತಿ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ಪಪಂ ಸದಸ್ಯ ವಿ.ಎಸ್. ಆನಂದಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಬೇಸಿಗೆ ಅವಧಿಯಲ್ಲಿ ನದಿ ಕಲುಷಿತ ಗೊಳ್ಳುವ ಮೂಲಕ ನೀರಿನ ಬಳಕೆ ಮಾಡಲು ಅಸಾಧ್ಯವಾಗುತ್ತಿದೆ.
ಕಾವೇರಿ ನದಿಯ ಎರಡೂ ಬದಿಯಲ್ಲಿ ಕಸದ ರಾಶಿಗಳು ತುಂಬಿ ತುಳುಕುತ್ತಿರುತ್ತದೆ. ಜನರು ತಮ್ಮ ದೈನಂದಿನ ತ್ಯಾಜ್ಯಗಳನ್ನು ಕಾವೇರಿ ನದಿಗೆ ಎಸೆಯುವ ಕಾರಣ ನದಿಯು ಕಲುಷಿತವಾಗುತ್ತಿರುವದಲ್ಲದೆ ಆ ನೀರನ್ನು ಬಳಸುವ ನಾಗರಿಕರಿಗೆ ಕಾಯಿಲೆಗಳು ಹರಡುವ ಸಾಧ್ಯತೆಗಳು ಅಧಿಕವಾಗಿವೆ. ಇದನ್ನು ತಡೆಗಟ್ಟಲು ನದಿ ತಟದಲ್ಲಿ ಕಸದ ತೊಟ್ಟಿಗಳನ್ನು ನಿರ್ಮಿಸಿ ಅದರಲ್ಲಿ ಕಸವನ್ನು ಸಂಗ್ರಹಣೆ ಮಾಡುವಂತೆ ಯೋಜನೆ ಯನ್ನು ರೂಪಿಸಿ ಮುಂದಿನ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಆ ಬಗ್ಗೆ ಚರ್ಚಿಸಲಾಗುವದು ಎಂದು ತಿಳಿಸಿದರು. ನದಿಯಲ್ಲಿ ತುಂಬಿದ್ದ ಬಟ್ಟೆ, ಬರೆ ಹಲವು ಬಗೆಯ ತ್ಯಾಜ್ಯಗಳನ್ನು ತೆರವುಗೊಳಿಸುವ ಮೂಲಕ ಕಾರ್ಯಕರ್ತರು ನದಿ ಯನ್ನು ಸ್ವಚ್ಛಗೊಳಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕ ಹರೀಶ್, ಕುಶಾಲನಗರ ವಾಸವಿ ಯುವಜನ ಸಂಘದ ಉಪಾಧ್ಯಕ್ಷ ವೈಶಾಕ್, ಪ್ರವೀಣ್‍ಕುಮಾರ್, ಆದರ್ಶ್, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್ ಮಾಜಿ ಅಧ್ಯಕ್ಷ ಕೆ. ಆರ್. ಶಿವಾನಂದನ್, ಕೊಡವ ಸಮಾಜದ ಮಾಜಿ ಅಧ್ಯಕ್ಷ ಬೋಸ್ ಮೊಣ್ಣಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ಜಯಲಕ್ಷ್ಮಿ, ಡಾಟಿ, ಯಶೋಧ, ಪಾರ್ವತಿ, ಸೌಮ್ಯ, ವಾರಿಜ, ಪ್ರಮೀಳಾ, ಚಂದ್ರಾವತಿ, ರೋಹಿಣಿ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.