ಮಡಿಕೇರಿ, ಜ. 24: ತೆಲಂಗಾಣದ ಸರೂರ್ ನಗರದ ಗಣಿ ಉದ್ಯಮಿ ಮಾರುತಿ ಪ್ರಸಾದ್ ಪುತ್ರ ವಿನಯ್‍ಗಾಗಿ ಇಂದು ಅಲ್ಲಿನ ಪೊಲೀಸ್ ತನಿಖಾ ತಂಡದೊಂದಿಗೆ ಸ್ಥಳೀಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ತನ್ನ ಹುಟ್ಟೂರಿ ನಿಂದ ಮಡಿಕೇರಿಗೆ ಬಂದಿರುವ ಶಂಕೆಯ ಕಾರು ಹಾಗೂ ಮೊಬೈಲ್ ಪತ್ತೆ ಯಾಗಿರುವ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ. ನಗರದ ಹಳೆಯ ಸಿದ್ದಾಪುರ ರಸ್ತೆಯ ಬದಿಯಲ್ಲಿ ಪತ್ತೆಯಾಗಿರುವ ಕಾರಿನ ತಪಾಸಣೆ ನಡೆಸಿರುವ ಪೊಲೀಸರು, ಸ್ಥಳದಿಂದ ವಾಹನವನ್ನು ನಗರ ಠಾಣೆಗೆ ತಂದಿರಿಸಿದ್ದಾರೆ.ಅಲ್ಲದೆ, ಈ ಸಂಬಂಧ ಸಿ.ಸಿ. ಕ್ಯಾಮರಾದಲ್ಲಿ ಮಾಹಿತಿ ಕಲೆಹಾಕಿರುವ ವೇಳೆ, ತಾ. 18ರಂದು ಬೆಳಗ್ಗಿನ ಜಾವ 5.50ರ ಸುಮಾರಿಗೆ ಮಡಿಕೇರಿಗೆ ಬಂದಿರುವ

(ಮೊದಲ ಪುಟದಿಂದ) ವಿನಯ್, ತನ್ನ ವಾಹನವನ್ನು ಹಳೆಯ ಸಿದ್ದಾಪುರ ರಸ್ತೆ ಬದಿ ನಿಲ್ಲಿಸುವದರೊಂದಿಗೆ, ಅಲ್ಲಿಂದ ಇಳಿದು ಮರಳಿ ಹೆದ್ದಾರಿಯ ಸುದರ್ಶನ ವೃತ್ತದತ್ತ ತೆರಳಿರುವ ಅಂಶ ಬೆಳಕಿಗೆ ಬಂದಿದೆ.

ಮಾತ್ರವಲ್ಲದೆ, ಸುದರ್ಶನ ವೃತ್ತದಿಂದ ನಗರದತ್ತ ಹೆಜ್ಜೆ ಇರಿಸಿರುವ ಈತ ಕಾಮಧೇನು ಪೆಟ್ರೋಲ್ ಬಂಕ್ ಕಡೆಗೆ ಸಾಗುತ್ತಿರುವದು ಗೋಚರಿಸಿದೆ. ಅಲ್ಲದೆ ವಿನಯ್ ಒಬ್ಬನೇ ತನ್ನ ಕಾರಿನಿಂದ ತೆರಳಿರುವದು ಖಾತರಿಯಾಗಿದೆ.

ಅಚ್ಚರಿಯ ಮಾಹಿತಿ: ಇನ್ನು ದೇವಿಗ್ಯಾಸ್ ಏಜೆನ್ಸಿಗೆ ಸಂಬಂಧಿಸಿದ ಸಿ.ಸಿ. ಟಿ.ವಿ. ಪರಿಶೀಲನೆ ವೇಳೆ ತೀವ್ರ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ತಾ. 18ರಂದು ಬೆಳಗ್ಗಿನ ಜಾವ 5.42ರ ಸುಮಾರಿಗೆ ಸಿದ್ದಾಪುರ ರಸ್ತೆಯಲ್ಲಿ ಕಾರು ನಿಂತಿದ್ದ ಸ್ಥಳದಿಂದ ಹೆಣ್ಣೊಬ್ಬಳು ಶರವೇಗದಿಂದ ಮುಂದೆ ಸಾಗುವದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆ ಕೂಡಲೇ ಕ್ಷಣಮಾತ್ರದಲ್ಲಿ ಬಂದ ಹಾದಿಯಲ್ಲೇ ಹಿಂತೆರಳುವ ದೃಶ್ಯ ಪುರುಷನಂತೆ ಟಿವಿಯಲ್ಲಿ ಸೆರೆಯಾಗಿದ್ದು; ಈ ವಿಚಿತ್ರ ಸಂಗತಿ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

ಪ್ರತ್ಯಕ್ಷದರ್ಶಿ ಹೇಳಿಕೆ : ತಾ. 18ರಂದು ಬೆಳಗ್ಗಿನ ಜಾವ ತಮ್ಮ ಮನೆಯ ಬಳಿ ಕೆಂಪು ಸ್ಕೋಡಾ ಕಾರು ಬಂದು ನಿಂತಿದ್ದ ಬಗ್ಗೆ ಖುದ್ದು ಗಮನಿಸಿರುವ ಬಬ್ಬು ಗಣಪತಿ ಅವರು, ಯಾರೋ ಪಕ್ಕದ ಹೋಂಸ್ಟೇಗೆ ಬಂದಿರಬಹುದೆಂದು ಅನುಮಾನ ಗೊಂಡಿದ್ದಾರೆ. ದಿನ ಕಳೆದರೂ ಕಾರಿನತ್ತ ಯಾರೂ ಸುಳಿಯದ ಕಾರಣ ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ವಿಷಯ ಮುಟ್ಟಿಸಿದ್ದಾರೆ. ಆ ಮೇರೆಗೆ ನಗರಠಾಣೆ ಪೊಲೀಸರು ಕಾರಿನಲ್ಲಿದ್ದ ಮೊಬೈಲ್ ಹಾಗೂ ಇತರ ಗುರುತು ಚೀಟಿ ವಶಕ್ಕೆ ಪಡೆದಿದ್ದಾರೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಯುವಕ ವಿನಯ್ ತಂದೆ ಸಹಿತ ತೆಲಂಗಾಣ ಪೊಲೀಸರು ಆಗಮಿಸುವ ದರೊಂದಿಗೆ ತನಿಖೆ ಕೈಗೊಂಡಿದ್ದಾರೆ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.

ತನಿಖೆಗೆ ಸಹಕಾರ : ಈ ಬಗ್ಗೆ ಪ್ರತಿಕ್ರಿಯೆ ಬಯಸಿದಾಗ ‘ಶಕ್ತಿ’ ಯೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ತೆಲಂಗಾಣ ಪೊಲೀಸರಿಗೆ ಎಲ್ಲಾ ರೀತಿ ಸಹಕಾರ ಕಲ್ಪಿಸುವದಾಗಿ ನುಡಿದರು. ಅಲ್ಲದೆ, ಯುವಕನ ನಾಪತ್ತೆಗೆ ಕಾರಣ ಕುರಿತು ಅಲ್ಲಿನ ಪೊಲೀಸರೇ ಮಾಹಿತಿ ಕಲೆ ಹಾಕುತ್ತಿದ್ದು, ಇನ್ನಷ್ಟೇ ಹೆಚ್ಚಿನ ವಿವರ ಲಭಿಸಬೇಕಿದೆ ಎಂದು ವಿವರಿಸಿದರು.

ಇನ್ನು ತೆಲಂಗಾಣದಿಂದ ಆಗಮಿಸಿ ತನಿಖೆಯಲ್ಲಿ ತೊಡಗಿರುವ ಅಧಿಕಾರಿ ಯಾದಯ್ಯ, ಇದೀಗ ಸಿ.ಸಿ. ಟಿವಿ ಮಾಹಿತಿ ಕಲೆಹಾಕುತ್ತಿದ್ದು, ಜಿಲ್ಲಾ ಪೊಲೀಸರ ಸಹಕಾರದಿಂದ ಹೆಚ್ಚಿನ ತನಿಖೆಯೊಂದಿಗೆ ವಿನಯ್ ಪತ್ತೆಗೆ ಮುಂದಾಗಿರುವದಾಗಿ ಸ್ಟಷ್ಟಪಡಿಸಿದರು.