ಮಡಿಕೇರಿ, ಜ. 23: ಶ್ರೀ ಕಾಳಿಕಾಂಭ ವಿಶ್ವಕರ್ಮ ಕುಶಲ ಕೈಗಾರಿಕಾ ಸಂಘಕ್ಕೆ ಕುಶಾಲನಗರದ ಹೆಬ್ಬಾಲೆ ಗ್ರಾಮದಲ್ಲಿ 1991 ರಲ್ಲಿ ಮಂಜೂರಾಗಿದ್ದ ಎರಡು ಏಕರೆ ಜಾಗದಲ್ಲಿ ಒಂದು ಏಕರೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿದಾರರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡುವದಾಗಿ ಸಂಘ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀಕಂಠಯ್ಯ, ಅಧಿಕಾರಿಗಳು ವಿಶ್ವಕರ್ಮ ಸಮುದಾಯವನ್ನು ನಿರಂತರವಾಗಿ ನಿರ್ಲಕ್ಷಿಸುತ್ತಲೇ ಬಂದಿರುವದರಿಂದ ದೂರು ನೀಡಿದರೂ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿಲ್ಲವೆಂದು ಆರೋಪಿಸಿದರು.
ವಿಶ್ವಕರ್ಮ ಸಮುದಾಯಕ್ಕೆ ಉದ್ಯೋಗ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಬೆಂಕಿಪೊಟ್ಟಣ ತಯಾರಿಕಾ ಘಟಕ ಆರಂಭಿಸಲು ಹೆಬ್ಬಾಲೆಯಲ್ಲಿ ಜಾಗವನ್ನು ಗುರುತಿಸಲಾಗಿತ್ತು. ಆದರೆ ಅರಣ್ಯ ಇಲಾಖೆ ಅನುಮತಿ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ಎತ್ತಿನ ಗಾಡಿ ಮತ್ತು ಮರದ ಪೀಠೋಪಕರಣ ತಯಾರಿಕಾ ಘಟಕ ಸ್ಥಾಪನೆಗೆಂದು ಜಾಗವನ್ನು ಬಳಸಿಕೊಳ್ಳಲು ನಿರ್ಧರಿಸಲಾಯಿತು. 1991 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಎರಡು ಏಕರೆ ಜಾಗವನ್ನು ಸಂಘಕ್ಕೆ ಮಂಜೂರು ಮಾಡಿದರು. ಆದರೆ ಸುಮಾರು ಒಂದು ಏಕರೆಯಷ್ಟು ಜಾಗ ಪ್ರಭಾವಿಗಳಿಂದ ಒತ್ತುವರಿಯಾಗಿದ್ದು, ಈ ಬಗ್ಗೆ ಉಪವಿಭಾಗಾಧಿಕಾರಿಗಳ ಕಚೇರಿಗೆ ದೂರು ನೀಡಿದರೂ ನ್ಯಾಯ ಸಿಗಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಲೋಕಾಯುಕ್ತರಿಗೂ ದೂರು ನೀಡಲಾಗಿದ್ದು, ಲೋಕಾಯುಕ್ತ ಕಚೇರಿಯ ಸಲಹೆಯಂತೆ ಒತ್ತುವರಿದಾರರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುತ್ತಿರುವದಾಗಿ ಅವರು ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ಬಿ. ರಾಜಾಚಾರ್, ಕಾರ್ಯದರ್ಶಿ ವಸಂತಾಚಾರ್, ನಿರ್ದೇಶಕ ಹೆಚ್.ಟಿ. ಮಂಜುನಾಥ್, ಪ್ರಮುಖ ಜಿ.ಎಲ್. ನಾರಾಯಣ ಹಾಗೂ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ವಿ. ಡಂಕಣಾಚಾರ್ ಉಪಸ್ಥಿತರಿದ್ದರು.