ಕೂಡಿಗೆ, ಜ. 23: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಕಾಲೋನಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 25 ಕುಟುಂಬಗಳು ಇದ್ದು, ಕಳೆದ 5 ವರ್ಷಗಳಿಂದಲೂ ಕಾಲೋನಿಗೆ ಯಾವದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸದೇ, ಈ ಕುಟುಂಬದವರಿಗೆ ಯಾವದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಪ್ರಕೃತಿ ವಿಕೋಪದ ಸಂದರ್ಭ 5 ಮನೆಗಳ ಗೋಡೆಗಳು ಬಿದ್ದು ಹಾನಿಯಾಗಿದ್ದರೂ ಸಹ ಗ್ರಾಮ ಪಂಚಾಯಿತಿಯಿಂದ ನೋಂದಣಿ ಮಾಡಿ ತೆರಳಿದ್ದಾರೆ ವಿನಃ ಯಾವದೇ ಪರಿಹಾರ ದೊರೆತಿಲ್ಲ ಎಂದು ಬ್ಯಾಡಗೊಟ್ಟ ಗ್ರಾಮದ ಕಾಲೋನಿಯ ನಿವಾಸಿಗಳು ಆರೋಪಿಸಿದ್ದಾರೆ.
ಇಲ್ಲಿಯ ಕುಟುಂಬದವರು ಎರಡೂವರೆ ವರ್ಷಗಳಿಂದಲೂ ಚರಂಡಿ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನ ದೊರೆತಿಲ್ಲ. ಬ್ಯಾಡಗೊಟ್ಟದಲ್ಲಿಯೇ ಇರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಮಂಚೂಣಿಯಲ್ಲಿದ್ದಾರೆ. ಆದರೆ ನಮಗೆ ಮಾತ್ರ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವದು ಸರಿಯಾದ ಕ್ರಮವಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮನೆಗಳಿಗೆ ಅತಿ ಶೀಘ್ರದಲ್ಲಿ ಮನೆ ಒದಗಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತ ಇದುವರೆಗೂ ಇದರ ಬಗ್ಗೆ ಗಮನ ಹರಿಸಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ತೆರಳಿದ್ದಾರೆ ವಿನಃ ಬಡ ಕುಟುಂಬಗಳಿಗೆ ಸೌಲಭ್ಯ ಒದಗಿಸಿಲ್ಲ. ಅಲ್ಲದೆ, ಈ ಕಾಲೋನಿಗೆ ಶುಚಿತ್ವ ಮತ್ತು ಗ್ರಾಮ ಪಂಚಾಯಿತಿಯಿಂದ ಒದಗಿಸಬಹುದಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವದರಲ್ಲಿ ತಾರತಮ್ಯವೆಸಗಿದ್ದಾರೆ ಎಂದು ಇಲ್ಲಿನ ನಿವಾಸಿಗಳಾದ ಗಣೇಶ್, ಗಿರೀಶ್, ಹೊನ್ನಮ್ಮ, ಜವರಮ್ಮ, ಕರಿಯಣ್ಣ, ಕಾಂತರಾ ಸೇರಿದಂತೆ 25 ಕ್ಕೂ ಹೆಚ್ಚು ಕುಟುಂಬಸ್ಥರು ಲಿಖಿತ ಹೇಳಿಕೆಯ ಮೂಲಕ ಆರೋಪಿಸಿದ್ದಾರೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಈ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದರೂ ಯಾವದೇ ಸ್ಪಂದನ ದೊರಕದೆ ಇರುವದರಿಂದ ಕೊಡಗು ಜಿಲ್ಲಾ ದಲಿತ ಹಿತ ರಕ್ಷಣಾ ಸಮಿತಿ ಮತ್ತು ಗ್ರಾಮಸ್ಥರೊಡಗೂಡಿ ಜಿಲ್ಲಾ ಪಂಚಾಯಿತಿಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಸಮಿತಿಯ ಅಧ್ಯಕ್ಷ ಅಣ್ಣಯ್ಯ, ಉಪಾಧ್ಯಕ್ಷ ಗಣೇಶ್ ಹಾಗೂ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.