ಶನಿವಾರಸಂತೆ, ಜ. 23: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಬುದ್ದಿವಂತಿಕೆ ಇರುತ್ತದೆ. ಆದರೆ ತಮ್ಮಲ್ಲಿ ಕೀಳರಿಮೆ, ಅಂಜಿಕೆ, ಅಳಕುಗಳನ್ನು ಮೈಗೂಡಿಸಿಕೊಂಡು ನಕರಾತ್ಮಕಗಾಗಿ ಆಲೋಚನೆ ಮಾಡುವದರಿಂದ ಪರೀಕ್ಷೆ ಎಂಬ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ಮುಖ್ಯಸ್ಥ ಯುವರಾಜ್ ಜೈನ್ ಹೇಳಿದರು

ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷೆ ಎದುರಿಸುವದು ಹೇಗೆ? ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ತಮ್ಮಲ್ಲಿರುವ ಕೀಳರಿಮೆ ನಿಸ್ಸಂಕೋಚಗಳಂತಹ ನಕಾರಾತ್ಮಕ ಆಲೋಚನೆಗಳಿಂದ ಹೊರಬಂದು ಆತ್ಮವಿಶ್ವಾಸ ಬೆಳಸಿಕೊಂಡರೆ ಸುಲಭವಾಗಿ ಪರೀಕ್ಷೆಯನ್ನು ಎದುರಿಸಬಹುದು ಎಂದರು.

ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಜಾಗೃತಿ ಮೂಡಿಸುವದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಯಾವದೇ ಅಂಜಿಕೆ ಅಳುಕಿಲ್ಲದೆ ಪರೀಕ್ಷೆ ಎದುರಿಸಬಹುದು ಎಂದರು.

ಕಾವೇರಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಹೆಚ್.ಎನ್. ದೇವರಾಜ್, ಭಾರತೀ ಪ್ರೌಢಶಾಲಾ ಶಿಕ್ಷಕ ರಂಗಸ್ವಾಮಿ, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಫಾದರ್ ಥೋಮಸ್, ಗೌಡಳ್ಳಿಯ ಪ್ರೌಢಶಾಲಾ ಶಿಕ್ಷಕ ದಿನೇಶ್, ಕಾರ್ಯಾಗಾರದ ಆಯೋಜಕರಾದ ಕೊಡ್ಲಿಪೇಟೆಯ ಪ್ರಕಾಶ್ ಮತ್ತು ಸುಲೇಮಾನ್ ಇತರರು ಉಪಸ್ಥಿತರಿದ್ದರು.