ಶ್ರೀಮಂಗಲ, ಜ. 24: ದೇಶದ ರಕ್ಷಣಾ ಪಡೆಯ ಏಕೈಕÀ ಮಹಾದಂಡನಾಯಕ ಹೆಗ್ಗಳಿಕೆಯ ಫೀ.ಮಾ. ಕಾರ್ಯಪ್ಪ ಕೊಡಗಿಗೆ ಮಾತ್ರವಲ್ಲದೆ, ದೇಶದ ಜನತೆಯನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದ ಸೇನಾನಿಯಾಗಿದ್ದಾರೆ. ಅವರ ಹುಟ್ಟುಹಬ್ಬವನ್ನು ಹುಟ್ಟೂರಾದ ಕೊಡಗಿನಲ್ಲಿ ಆಚರಿಸಲು ಸರ್ಕಾರ ನಿರ್ಲಕ್ಷ್ಯ ತಾಳಿರುವದು ಸೇನಾಧಿಕಾರಿಗೆ ಮಾಡಿರುವ ಅವಮಾನವಾಗಿದೆ.
ಒಂದು ವೇಳೆ ಸರ್ಕಾರ ಈ ಹಿಂದಿನಂತೆ ಫಿ.ಮಾ. ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ಮಾಡಲು ಹಿಂದೇಟು ಹಾಕಿದರೆ ನಮ್ಮ ಸಂಘÀಟನೆಯಿಂದ ಗೋಣಿಕೊಪ್ಪಲಿನಲ್ಲಿ ಅರ್ಥಪೂರ್ಣವಾಗಿ ಆಚರಿಸುವದಾಗಿ ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೀ. ಮಾ. ಕಾರ್ಯಪ್ಪ ಸ್ವತಂತ್ರ ನಂತರದಲ್ಲಿ ಭಾರತದ ಸೈನ್ಯವನ್ನು ಜಾಗತಿಕ ಮಟ್ಟದಲ್ಲಿ ಅತ್ಯಂತ ಶಿಸ್ತುಬದ್ಧ ಸೇನೆಯಾಗಿ ರೂಪಿಸಿ ಅತ್ಯುನ್ನತ ಶ್ರೇಣಿಗೆ ತಂದು ನಿಲ್ಲಿಸಿದಂತಹ ಕೀರ್ತಿ ಕಾರ್ಯಪ್ಪರವರಿಗೆ ಸಲ್ಲುತ್ತದೆ ಎಂದು ಹೇಳಿದರು.
ದೇಶದ ಗಡಿ ಸಮಸ್ಯೆಯಿಂದ ಹಿಡಿದು ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಅವರ ಕೊಡುಗೆ ಅಪಾರ. ದೇಶದ ಭೂಸೇನೆ, ನೌಕಾ ಸೇನೆ, ವಾಯು ಸೇನೆಯ ಮೂರು ವಿಭಾಗಗಳನ್ನು ಅತ್ಯಲ್ಪ ಸಮಯದಲ್ಲಿ ವಿಶ್ವವೇ ಬೆರಗಾಗುವ ಮಟ್ಟದಲ್ಲಿ ರೂಪಿಸಿದ ಕೊಡುಗೆ ಇವರದ್ದಾಗಿದೆ. ದೇಶದ ವಿಭಜನೆಯ ಸಂದರ್ಭದಲ್ಲಿ ಅತ್ಯಂತ ಸಮರ್ಥನೀಯವಾಗಿ ಸೇನಾಪಡೆಯನ್ನು ವಿಂಗಡಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಇಂತಹ ಮಹಾನ್ ಸೇನಾನಿಯೊಬ್ಬರನ್ನು ವೇದಿಕೆಗಳಲ್ಲಿ ನಿಂತು ಹೊಗಳುವ ಸರ್ಕಾರಗಳು ಹಾಗೂ ರಾಜಕೀಯ ವ್ಯಕ್ತಿಗಳು ಅವರ ಹುಟ್ಟೂರಲ್ಲಿಯೆ ಜಯಂತಿ ಆಚರಿಸಲು ಹಿಂದೇಟು ಹಾಕುತ್ತಿರುವದು ನಾಚಿಕೆಗೇಡಿನ ವಿಷಯವಾಗಿದೆ ಎಂದರು.
ಕಳೆದ 5 ವರ್ಷದ ಹಿಂದೆ ಸ್ಥಳಿಯ ನಿವೃತ್ತ ಸೇನಾಧಿಕಾರಿಗಳು, ಯೋಧರು, ಕೆಲವು ಸಂಘ ಸಂಸ್ಥೆಗಳ ಮುಖಂಡರು ಸೇರಿ ಫೀ.ಮಾ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂನ್ನು ರಚಿಸಿ ಅದರ ಮೂಲಕ ಮೊಟ್ಟ ಮೊದಲ ಬಾರಿಗೆ ಈ ನಾಡಿನ ಇಬ್ಬರು ಮಹಾನ್ ಯೋಧರ ಸ್ಮರಣೆಯನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಮಹಾನ್ ನಾಯಕರ ಹುಟ್ಟುಹಬ್ಬವನ್ನು ದೇಶಕ್ಕೆ ದೇಶವೇ ಸೆಟೆದು ನಿಲ್ಲುವಂತೆ ಅತ್ಯಂತ ಸ್ಪೂರ್ತಿದಾಯಕವಾಗಿ ನಡೆಸಿದರು. ಆ ಮೂಲಕ ಯಾವ ಯುವ ಜನತೆ ಮತ್ತು ದೇಶದ ಪ್ರಜೆಗಳಲ್ಲಿ ದೇಶ ಪ್ರೇಮವು ಹುಟ್ಟುವಂತೆ ಮಾಡುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು. ಅನಂತರದಲ್ಲಿ ಸರ್ಕಾರವು ಈ ಕಾರ್ಯಕ್ರಮವನ್ನು ಆಚರಿಸುವದಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಹಾನ್ ಯೋಧರ ಹುಟ್ಟುಹಬ್ಬವನ್ನು ಆಚರಿಸಲು ಸಹಕಾರ ನೀಡುತ್ತಾ ಬಂದಿತ್ತು. ಆದರೆ ಈ ವರ್ಷ ಈ ಯೋಧರ ಹುಟ್ಟುಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಸರ್ಕಾರಿ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪುಗೊಳ್ಳದೆ ಇರುವದು ಸಂಶಯಗಳಿಗೆ ಎಡೆಮಾಡಿದೆ.
ವಿಶ್ವಕ್ಕೇ ಮಾದರಿಯಾಗಿರುವ ಯುವ ಜನತೆಗೆ ಸ್ಪೂರ್ತಿಯ ಸೆಲೆಯಂತೆ ಬದುಕಿರುವ ಶಿಸ್ತು ಮತ್ತು ಸಮಯಪಾಲನೆಯ ಪ್ರತೀಕದಂತೆ ಅತ್ಯಂತ ಸರಳವಾಗಿ ಯಾವದೇ ಸರಕಾರಿ ಸವಲತ್ತುಗಳಿಗೆ, ಬಿರುದು ಬಿನ್ನಾಣಗಳಿಗೆ ಅಂಗಲಾಚದೆ ಶಿಸ್ತಿನ ಸಿಪಾಯಿಯಂತೆ ಬದುಕಿರುವಂತಹ ಮಹಾನ್ ವ್ಯಕ್ತಿಯು ಈ ರಾಜ್ಯದ ಸುಪುತ್ರರು ಎಂದು ಹೆಮ್ಮೆ ಪಡಬೇಕಾದ ಸಮಯದಲ್ಲಿ ಸರ್ಕಾರಗಳು ಮತ್ತು ಜನಪ್ರತಿನಿಧಿಗಳೆ ಕಡೆಗಣಿಸುತ್ತಿರುವದು ಯಾವ ದುರುದ್ದೇಶದಿಂದ ಎಂದು ಜನತೆಗೆ ಅರಿವಾಗಬೆಕಾಗಿದೆ ಎಂದು ಮಂಜು ಚಿಣ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ವರ್ಷಗಳಂತೆ ಜನ್ಮ ದಿನಾಚರಣೆಯನ್ನು ಆಚರಣೆ ಮಾಡದಿದ್ದರೆ, ಜನವರಿ 28 ರಂದು ಯುಕೋ ಸಂಘಟನೆಯ ಆಶ್ರ್ರಯದಲ್ಲಿ ಗೋಣಿಕೊಪ್ಪದಲ್ಲಿ ಅರ್ಥಪೂರ್ಣವಗಿ ಫೀ.ಮಾ. ಕಾರ್ಯಪ್ಪ ಅವರ ಜನ್ಮ ಜಯಂತಿಯನ್ನು ಆಚರಿಸಲಾಗುವದು. ಮುಂದಿನ ದಿನಗಳಲ್ಲಿ ಇಂತಹ ಮಹಾನ್ ಚೇತನಗಳ ಸ್ಮರಣೆಯನ್ನು ಯುಕೋ ಸಂಘಟನೆ ವತಿಯಿಂದ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಿದೆ ಎಂದು ಮಂಜು ಚಿಣ್ಣಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚೆಪ್ಪುಡಿರ ಸುಜುಕರುಂಬಯ್ಯ, ಉಳುವಂಗಡ ಲೋಹಿತ್ ಭೀಮಯ್ಯ ಹಾಜರಿದ್ದರು.
ಕೊಡವ ಮಕ್ಕಡ ಕೂಟದಿಂದ ಖಂಡನೆ
ರಾಷ್ಟ್ರದ ಸೇನಾ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತಾ. 28 ರಂದು ಪ್ರತಿವರ್ಷ ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಯಾವದೇ ಪೂರ್ವ ಸಿದ್ಧತೆ ನಡೆದಿಲ್ಲ. ಕಾರ್ಯಕ್ರಮ ನಡೆಯುವದು ಅನುಮಾನವಾಗಿದ್ದು, ಇದನ್ನು ಖಂಡಿಸುವದಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಸೇನೆಯಲ್ಲಿ ದೇಶ ರಕ್ಷಣೆಗಾಗಿ ಫೀ. ಮಾ.ಕೆ.ಎಂ. ಕಾರ್ಯಪ್ಪ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಸೇವೆಗಾಗಿ ದೆಹಲಿಯ ಕವಾಯತು ಮೈದಾನಕ್ಕೆ ಕಾರ್ಯಪ್ಪ ಅವರ ಹೆಸರಿಡಲಾಗಿದೆ. ಅಲ್ಲದೆ ಕಾರ್ಯಪ್ಪ ಅವರು, ಪ್ರಥಮ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡ ಜ. 15 ಅನ್ನು ಸೇನಾ ದಿನವೆಂದು ಆಚರಿಸಲಾಗುತ್ತದೆ. ಇಷ್ಟು ಮಹಾನ್ ಸಾಧನೆ ಮಾಡಿರುವ ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ.
ಸರ್ಕಾರ ಸೆಕ್ಸನ್ ಹಾಕಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತದೆ. ಆದರೆ ಸೇನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರನ್ನು ಕಡೆಗಣಿಸಿರುವದು ಮಾತ್ರ ವಿಪರ್ಯಾಸ. ಕಾರ್ಯಪ್ಪ ಅವರ ಜನ್ಮ ದಿನಚಾರಣೆಗೆ ಇನ್ನು ಕೆಲವು ದಿನಗಳು ಮಾತ್ರವಿದ್ದು, ಜಿಲ್ಲಾಡಳಿತ ಪ್ರತಿ ವರ್ಷದಂತೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಬೇಕು ಎಂದು ಅಯ್ಯಪ್ಪ ಒತ್ತಾಯಿಸಿದ್ದಾರೆ.
ಪೊನ್ನಂಪೇಟೆ ಸಮಾಜ ಅಸಮಾಧಾನ
ಶ್ರೀಮಂಗಲ: ಕಾರ್ಯಪ್ಪ ಅವರ ಜನ್ಮ ಜಯಂತಿ ಆಚರಣೆಗೆ ಯಾವದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಮಹಾನ್ ಸೇನಾನಿಯ ಸ್ಮರಣೆಯನ್ನು ಮರೆತಂತಿದೆ. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಜನ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಸರ್ಕಾರವನ್ನು ಒತ್ತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಮಹಾ ಸೇನಾನಿಯ ಜನ್ಮ ಜಯಂತಿಯ ಆಚರಣೆಗೆ ಇದುವರೆಗೆ ಸರ್ಕಾರದಿಂದ ಯಾವದೇ ಪೂರ್ವಭಾವಿ ಸಭೆ ಆಗಿಲ್ಲ. ಹಾಗಿರುವಾಗ ಮಹಾನ್ ಸೇನಾನಿಯನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳು ಮರೆತಿದ್ದಾರೆಯೇ ಅಥವಾ ಗೊತ್ತಿದ್ದೂ ಕಡೆಗಣಿಸಲಾಗುತ್ತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಾಕಷ್ಟು ಸಮಯದ ಮೊದಲೇ ಗಮನ ಹರಿಸಬೇಕಿತ್ತು. ಈ ಹಿಂದಿನಂತೆ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಹಿಂದೇಟು ಹಾಕಿದರೆ ಅದು ಮಹಾನ್ ಸೇನಾನಿಗೆ ಮಾಡುವ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಒಂದು ವೇಳೆ ಜಯಂತಿ ಮಾಡದಿದ್ದರೆ ಫೀ. ಮಾ. ಕಾರ್ಯಪ್ಪ ಅವರ ಬಗ್ಗೆ ಅಭಿಮಾನ ಮತ್ತು ಗೌರವ ಇರುವ ಜಿಲ್ಲೆಯ ಜನತೆ ಸೇರಿ ಸ್ಮರಣೆ ಮಾಡಿಕೊಳ್ಳುವ ಕಾರ್ಯಕ್ರಮಕ್ಕೆ ಬೆಂಬಲ ನೀಡಲಾಗುವದು ಎಂದು ಹೇಳಿದರು.