ಕೂಡಿಗೆ, ಜ. 24: ಕೂಡಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವನತ್ತೂರು ಗ್ರಾಮದ ಆನೆಕೆರೆ ರಸ್ತೆ ಬದಿಯಲ್ಲಿರುವ ಬೃಹತ್ ಬಂಡೆಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪುರಾತನ ಹಿನ್ನಲೆಯುಳ್ಳ ಆನೆಕೆರೆಯು ಈ ವ್ಯಾಪ್ತಿಯ ನೂರಾರು ರೈತರಿಗೆ ಬೇಸಾಯ ಮಾಡಲು ಮೂಲವಾಗಿದೆ. ಈ ಕೆರೆಯ ಸಮೀಪದಲ್ಲಿ ಕಿರಿದಾದ ರಸ್ತೆಯಿದ್ದು, ಈ ರಸ್ತೆಯು ಕೂಡಿಗೆಯಿಂದ ಹಾರಂಗಿಯನ್ನು ಸಂಪರ್ಕಿಸುವ ರಸ್ತೆಯಾಗಿದೆ. ಆನೆಕೆರೆಯ ರಸ್ತೆಯ ಬಲಭಾಗಕ್ಕೆ ಗ್ರಾ.ಪಂ. ಅನುಮತಿಯಿಲ್ಲದೆ ಬೇರೆಡೆಯಿಂದ ಬೃಹತ್ ಗಾತ್ರದ ಬಂಡೆಗಳನ್ನು ಸುರಿದಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಾಗಲೇ ಕೂಡಮಂಗಳೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯಿಶಾ, ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಪೊಲೀಸ್ ಇಲಾಖೆಯ ಮೂಲಕ ಕಾನೂನು ಕ್ರಮ ಕೈಗೊಳ್ಳಲು ಪಂಚಾಯಿತಿ ಮುಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.