ಮಡಿಕೇರಿ, ಜ. 24: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಹುಣಸೂರು ಕಾಫಿ ಸಂಸ್ಕರಣಾ ಘಟಕದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಅಳವಡಿಸಿರುವ ಕಾಫಿ ಸಂಸ್ಕರಣಾ ಯಂತ್ರೋಪಕರಣಗಳನ್ನು ತಾ. 25 ರಂದು (ಇಂದು) ಲೋಕಾರ್ಪಣೆ ಮಾಡಲಾಗುವದು ಎಂದು ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಹುಣಸೂರು ಉದ್ದಿಮೆಯಲ್ಲಿರುವ ಸಂಸ್ಕರಣಾ ಯಂತ್ರೋಪಕರಣಗಳು ಹಳೆಯದಾಗಿದ್ದು, ಗಂಟೆಗೆ ಅರ್ಧ ಟನ್ ಕಾಫಿ ಸಂಸ್ಕರಣಾ ಸಾಮಥ್ರ್ಯವನ್ನು ಮಾತ್ರ ಹೊಂದಿದೆ. ಅಲ್ಲದೆ ಗ್ರೇಡರ್‍ಗಳು ಕೂಡ ಹಳೆಯದಾಗಿರುವದರಿಂದ ಇದರ ಬಿಡಿಭಾಗಗಳು ದೊರೆಯುವದು ಕಷ್ಟವಾಗಿದೆ ಎಂದರು.

ಉದ್ದಿಮೆಗೆ ವಿವಿಧ ದರ್ಜೆಯ ಕಾಫಿ ಬೆಳೆ ಮಿಶ್ರಣವಾಗಿ ಬರುವದರಿಂದ ಗುಣಮಟ್ಟ ಅನುಸಾರ ವಿಂಗಡಿಸುವ ವೆಚ್ಚವೂ ದುಬಾರಿಯಾಗುತ್ತಿದೆ. ಇಂದಿನ ಕಾಫಿ ಮಾರುಕಟ್ಟೆ ಧಾರಣೆ ಪ್ರತಿನಿತ್ಯ ಏರಿಳಿತವಾಗುತ್ತಿರುವದರಿಂದ ಕಾಫಿ ಸಂಸ್ಕರಣೆ ಮತ್ತು ದರ್ಜೆಗನುಸಾರವಾಗಿ ವಿಂಗಡಿಸುವ ಕಾರ್ಯ ವಿಳಂಬವಾದಲ್ಲಿ ಬೆಳೆಗಾರರಿಗೂ ನಷ್ಟವಾಗುತ್ತದೆ. ಇದನ್ನು ಮನಗಂಡು ಕಡಿಮೆ ಅವಧಿಯಲ್ಲಿ ಹೆಚ್ಚು ಸಾಮಥ್ರ್ಯದ ಹಾಗೂ ಈಗಿನ ಬೇಡಿಕೆಯ ದರ್ಜೆಗನುಸಾರವಾಗಿ ವಿಂಗಡಿಸುವ ಹೆಚ್ಚುವರಿ ಸಾಮಥ್ರ್ಯದ ಗ್ರೇಡರ್‍ಗಳನ್ನು ಅಳವಡಿಸಿ ಸಂಸ್ಕರಣಾ ಸಮಯ ಮತ್ತು ವೆಚ್ಚವನ್ನು ಕಡಿಮೆಗೊಳಿಸಲು ಸುಧಾರಿತ ಯಂತ್ರೋಪಕರಣಗಳನ್ನು ಅಳವಡಿಸಲು ಸಂಘದ ಆಡಳಿತ ಮಂಡಳಿ ಯಶಸ್ವಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಸಕ್ತ ಸಂಸ್ಥೆಯು ಲಾಭದಲ್ಲಿ ಮುನ್ನಡೆಯುತ್ತಿದ್ದರೂ, ಹಿಂದಿನ ನಷ್ಟವನ್ನು ಭರಿಸಲು ಸಾಕಷ್ಟು ಹೆಣಗಾಡುತ್ತಿದೆ. ಇದರ ನಡುವೆಯೂ ತನ್ನ ಸ್ವಂತ ಬಂಡವಾಳದಲ್ಲಿ ರೂ. 60 ಲಕ್ಷ ವೆಚ್ಚದಲ್ಲಿ ಗಂಟೆಗೆ ಮೂರು ಟನ್ ಸಂಸ್ಕರಣಾ ಕಾರ್ಯ ನಡೆಸುವ ಹಲ್ಲರ್, ಗ್ರ್ಯಾವಿಟಿ ಸಪರೇಟರ್ ಹಾಗೂ ಇತ್ತೀಚಿನ ಕಾಫಿ ವಿಂಗಡಿಸುವ ಗ್ರೇಡರ್‍ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಮತ್ತೊಂದು ಪೆಟ್ರೋಲ್ ಬಂಕ್

ಸಂಘದ ವತಿಯಿಂದ ಈಗಾಗಲೇ ಹುಣಸೂರಿನಲ್ಲಿ ಒಂದು ಪೆಟ್ರೋಲ್ ಬಂಕ್ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಮತ್ತೊಂದು ಬಂಕ್ ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಇಂಡಿಯನ್ ಆಯಿಲ್ ಕಾರ್ಪೋರೇಷನ್‍ನೊಂದಿಗೆ ವ್ಯವಹಾರ ನಡೆಸಲಾಗುತ್ತಿದೆ ಎಂದು ಹೇಳಿದರಲ್ಲದೆ, ಹೆಬ್ಬಾಲೆ ಉದ್ದಿಮೆಯಲ್ಲಿ ವೇ ಬ್ರಿಡ್ಜ್ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸಂಘದ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ಹಿರಿಯರು ಕೂಡಿಟ್ಟ ಆಸ್ತಿ ಮತ್ತು ಹಾಕಿಕೊಟ್ಟ ಭದ್ರವಾದ ಬುನಾದಿಯಿಂದಾಗಿ ಕೊಡಗು ಕಾಫಿ ಬೆಳೆಗಾರರ ಸಂಘ ಭದ್ರವಾಗಿ ನಿಂತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಏಕೈಕ ಸಹಕಾರ ಸಂಸ್ಥೆಯಾಗಿ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಉಳಿದಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಜಿಲ್ಲೆಯ ಬೆಳೆಗಾರರ ಮೇಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಹೊಸೂರು ರಮೇಶ್ ಜೋಯಪ್ಪ, ನಾಯಕಂಡ ಅಯ್ಯಣ್ಣ, ಲೀಲಾ ಮೇದಪ್ಪ, ಧರ್ಮಾವತಿ ಉಪಸ್ಥಿತರಿದ್ದರು.