ಕುಶಾಲನಗರ, ಜ. 23: ನದಿಯಲ್ಲಿ ಹರಿಯುವ ನೀರನ್ನು ಪವಿತ್ರ ತೀರ್ಥದಂತೆ ಸಂರಕ್ಷಿಸುವದು ಎಲ್ಲರ ಕರ್ತವ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ. ನಾಣಯ್ಯ ಕರೆ ನೀಡಿದ್ದಾರೆ.
ಕುಶಾಲನಗರದಲ್ಲಿ ಮಾತೆ ಕಾವೇರಿ ಆರತಿ ಬಳಗ, ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಜೀವನದಿ ಕಾವೇರಿಗೆ ನಡೆದ 90ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೂಲ ಕಾವೇರಿಯಿಂದಲೇ ಸ್ವಚ್ಛತೆಗೆ ಆದ್ಯತೆ ಅಗತ್ಯವಾಗಿದೆ ಎಂದ ಅವರು, ಕಾವೇರಿ ಸಂರಕ್ಷಣೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಆತಂಕ ಎದುರಾಗಲಿದೆ. ಗಂಗಾ ನದಿ ಯೋಜನೆ ರೀತಿಯಲ್ಲಿ ಕಾವೇರಿ ನದಿಗೆ ಯೋಜನೆ ರೂಪುಗೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸ್ಥಳೀಯ ಮಹಿಳಾ ಭಜನಾ ಮಂಡಳಿಯ ಪ್ರಮುಖರಾದ ರಮಾ ವಿಜಯೇಂದ್ರ, ನದಿ ಸಂರಕ್ಷಣೆಗೆ ಮಹಿಳೆಯರು ಜಾಗೃತರಾಗಬೇಕೆಂದು ತಿಳಿಸಿದರು.
ಅಯ್ಯಪ್ಪಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಗಣಪತಿ ಅವರು ಮಾತನಾಡಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಸಮಿತಿ ಕಳೆದ 10 ವರ್ಷಗಳಿಂದ ಜೀವನದಿಯ ಸ್ವಚ್ಛತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅರಿವು ಜಾಗೃತಿ ಮೂಡಿಸುತ್ತಿರುವ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಅಗಲಿದ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಒಂದು ನಿಮಿಷ ಕಾಲ ಮೌನಾಚರಣೆ ಮೂಲಕ ಸÀಂತಾಪ ಸೂಚಿಸಿಲಾಯಿತು.
ಕುಶಾಲನಗರ ದೇವಾಲಯ ಒಕ್ಕೂಟದ ಗೌರವಾಧ್ಯಕ್ಷ ಕೆ.ಆರ್. ಶಿವಾನಂದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಪ.ಪಂ. ಸದಸ್ಯ ವಿ.ಎಸ್. ಆನಂದಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಂಜುನಾಥ್, ಶ್ರೀಮತಿ ನಾಣಯ್ಯ, ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ, ಮಾಜಿ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಗ್ರೀನ್ ಸಿಟಿ ಫೋರಂನ ಚೈಯಂಡ ಸತ್ಯ, ನದಿ ಜಾಗೃತಿ ಸಮಿತಿ ಸಂಚಾಲಕ ಡಿ.ಆರ್. ಸೋಮಶೇಖರ್, ಕಾವೇರಿ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಬಳಗದ ಪ್ರಮುಖರಾದ ಕೆ.ಜಿ. ಮನು, ವೈಶಾಖ್, ಉಮಾಶಂಕರ್, ಮಹಿಳಾ ಭಜನಾ ಮಂಡಳಿ ಸದಸ್ಯರು, ಕೊಡವ ಸಮಾಜದ ನಿರ್ದೇಶಕರು, ಬಳಗದ ಸದಸ್ಯರು ಇದ್ದರು.