ಕೊಡಗಿನ ಪ್ರಮುಖ ದೇವಾಲಯಗಳಾದ ತಲಕಾವೇರಿ, ಭಗಂಡೇಶ್ವರ, ಪಾಡಿ ಇಗ್ಗುತಪ್ಪ, ಪಾಲೂರಪ್ಪ ಮತ್ತು ಇರ್ಪು ರಾಮೇಶ್ವರ ದೇವಾಲಯಗಳಿಗೆ ಕೊಡಗಿನ ರಾಜರ ಕಾಲದಲ್ಲಿಯೇ ಜಮೀನು ಮತ್ತು ಭತ್ತದ ಗದ್ದೆಗಳನ್ನು ಮಂಜೂರು ಮಾಡಲಾಗಿತ್ತು. ದೇವಾಲಯಗಳಲ್ಲಿನ ನಿತ್ಯ ಧಾರ್ಮಿಕ ವಿಧಿವಿಧಾನಗಳ ನಿರ್ವಹಣೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ನಿರಂತರವಾಗಿ ಒದಗಿಸುವದು ಹಾಗೂ ದೇವಾಲಯದ ನಿರ್ವಹಣೆಯಲ್ಲಿ ನಿರತರಾದವರಿಗೆ ಜೀವಾನಾಧಾರ ಒದಗಿಸುವದು ಈ ರೀತಿಯ ಜಮೀನು ಮಂಜೂರಾತಿಯ ಹಿಂದಿನ ಉದ್ದೇಶವಾಗಿತ್ತು. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿಯೂ ಈ ವ್ಯವಸ್ಥೆ ಮುಂದುವರಿದಿತ್ತು.
ಆದರೆ ಇತ್ತೀಚಿನ ವರುಷಗಳಲ್ಲಿ ಈ ವ್ಯವಸ್ಥೆಗೆ ಧಕ್ಕೆ ಬಂದಿದೆ. ಕರ್ನಾಟಕ ಸರಕಾರದ ಭೂ ಸುಧಾರಣಾ ಕಾಯಿದೆಯ ಫಲವಾಗಿ ಜಾರಿಗೆ ಬಂದ ಉಳುವವನಿಗೆ ಭೂಮಿ ಯೋಜನೆ ಯಡಿಯಲ್ಲಿ ಈ ದೇವಾಲಯಗಳಿಗೆ ಸೇರಿದ ಬಹುತೇಕ ಗದ್ದೆಯನ್ನು ಕೃಷಿ ಮಾಡುತ್ತಿದ್ದವರಿಗೆ ಕಾನೂನುಬದ್ಧವಾಗಿ ಮಂಜೂರು ಮಾಡಲಾಗಿತ್ತು. ಇತ್ತೀಚೆಗೆ ಉಳಿದ ಜಮೀನನ್ನು ಕೂಡ ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿ ದ್ದಾರೆ. ಈ ಕ್ಷೇತ್ರದ ಸಂರಕ್ಷಣೆ ಮತ್ತು ನಿರ್ವಹಣೆಯ ಹೊಣೆ ಹೊತ್ತ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಇಲಾಖೆ, ಜಿಲ್ಲಾಡÀಳಿತ ಮತ್ತು ದೇವಾಲಯ ಆಡಳಿತ ಮಂಡಳಿಗಳ ವೈಫಲ್ಯದಿಂದ ಈ ನಿಟ್ಟಿನಲ್ಲಿ ಯಾವದೇ ಪರಿಣಾಮಕಾರಿ ಕ್ರಮವನ್ನು ಕೈಗೊಳ್ಳಲಾಗಿಲ್ಲ.
ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಾಲಯಗಳ ಜಮೀನು, ದೇವರಕಾಡುಗಳ ಅತಿಕ್ರಮಣ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ 16-09-2008ರಲ್ಲಿ ಸರಕಾರ ಆದೇಶ ಹೊರಡಿಸಿದೆ.
ಈ ಆದೇಶದ ಅನ್ವಯ ಮುಜರಾಯಿ ಇಲಾಖೆಯ ಜಮೀನು ಅತಿಕ್ರಮಣದ ವಿಚಾರದಲ್ಲಿ ಸರ್ವೇ ನಡೆಸಿದ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ವರದಿಯೊಂದನ್ನು ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಕೆಲವು ಆಘಾತಕಾರಿ ವಿಚಾರಗಳು ಬಯಲಿಗೆ ಬಂದಿವೆÉ. ಭಾಗಮಂಡಲ ಹೋಬಳಿ ತಾವೂರು, ತಣ್ಣಿಮಾನಿ ಮತ್ತು ಭಾಗಮಂಡಲ ಗ್ರಾಮಗಳಲ್ಲಿರುವ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಒಟ್ಟು 195.90 ಎಕರೆ ಜಮೀನಿನಲ್ಲಿ 156.04 ಎಕರೆಯನ್ನು 71ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ.
ಭಾಗಮಂಡಲ ಪಟ್ಟಣದಲ್ಲಿರುವ ಶ್ರೀ ಭಗಂಡೇಶ್ವರ ದೇವಾಲಯದ ಸುತ್ತ ಮುತ್ತಲಿನ ಜಮೀನನ್ನು ದೇವಾಲಯದ ಸೇವೆ ಸಲ್ಲಿಸುವವರಿಗೆ ನೀಡಲಾಗಿತ್ತು. ಈ ಜಮೀನನ್ನು ಕೂಡ ಕೆಲವರು ತಮ್ಮ ಹೆಸರಿಗೆ ಖಾತೆ ಮಾಡಿಕೊಂಡು ಪರಭಾರೆ ಮಾಡಿದ ಉದಾಹರಣೆ ಯಿದೆ. ಇದೀಗ ದೇವಾಲಯದ ಆವರಣಕ್ಕೆ ಹೊಂದಿಕೊಂಡಂತ ಈ ರೀತಿಯ ಜಮೀನುಗಳಲ್ಲಿ ಮನೆ ನಿರ್ಮಿಸಲಾಗಿದ್ದು, ಆ ಸ್ಥಳವನ್ನು ಹಂದಿ ಸಾಕಾಣೆ, ಕೋಳಿ ಸಾಕಾಣೆಗೆ ಬಳಸಲಾಗುತ್ತಿದೆ. ಇದೆಲ್ಲದರ ತ್ಯಾಜ್ಯ ಕನ್ನಿಕೆ ನದಿಯ ಮೂಲಕ ಪವಿತ್ರ ತ್ರಿವೇಣಿ ಸಂಗಮ ಸೇರುತ್ತಿದೆ.
ಆದರೂ ಕೂಡ ರಾಜ್ಯ ಸರಕಾರವಾಗಲೀ, ಜಿಲ್ಲಾಡಳಿತ ವಾಗಲೀ, ದೇವಾಲಯ ಆಡಳಿತ ಮಂಡಳಿಯಾಗಲೀ ಈ ಒತ್ತುವರಿ ಯನ್ನು ತೆರವುಗೊಳಿಸಲು ಯಾವ ಕ್ರಮವನ್ನು ಕೈಗೊಂಡಿಲ್ಲ. ಸರಕಾರಕ್ಕೆ ಸೇರಿದ ಜಮೀನಿನ ಅಕ್ರಮ ಒತ್ತುವರಿಯ ಕುರಿತಾಗಿ ರಾಜ್ಯ ಉಚ್ಚನ್ಯಾಯಾಲಯ ನೀಡಿದ ಆದೇಶ ಮತ್ತು 1964ರ ಕರ್ನಾಟಕ ಭೂಕಂದಾಯ ಕಾಯಿದೆಗೆ ರಾಜ್ಯ ಸರಕಾರ ತರಲಾದ ತಿದ್ದುಪಡಿಗೂ ಯಾವದೇ ಬೆಲೆಯಿಲ್ಲದಾಗಿದೆ.
ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರಗಳು ಕೊಡಗಿನ ಸಾಮಾಜಿಕ, ಸಾಂಸ್ಕøತಿಕ ಜನಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ವಿಚಾರ ಭಾವನಾತ್ಮಕವಾಗಿರುವದರಿಂದ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದೊಂದಿಗೂ ತಳಕು ಹಾಕಿಕೊಂಡಿದೆ.
ಈ ವಿಚಾರದಲ್ಲಿ ಯಾವದೇ ನೆಪವನ್ನು ಮುಂದಿಡದೇ, ರಾಜಕೀಯ ಒತ್ತಡಗಳಿಗೆ ಒಳಗಾಗದೇ ಈಗಾಗಲೇ ಖಚಿತವಾಗಿರುವ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗುವಂತೆ ಹಾಗೂ ಈ ಒತ್ತುವರಿದಾರರ ಮೇಲೆ 1964ರ ಕರ್ನಾಟಕ ಭೂಕಂದಾಯ ಕಾಯಿದೆಯ ಸೆಕ್ಷನ್ 192-ಎ ವಿಧಿಯಡಿ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ನಾವು ಈಗಾಗಲೇ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಇಲಾಖೆ, ಜಿಲ್ಲಾಡಳಿತ ಮತ್ತು ಶ್ರೀ ಭಗಂಡೇಶ್ವರ- ತಲಕಾವೇರಿ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿಸಿದ್ದೇವೆ.
ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ಇಲಾಖೆ, ಜಿಲ್ಲಾಡಳಿತ ಮತ್ತು ಶ್ರೀಭಗಂಡೇಶ್ವರ- ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಶ್ರೀಭಗಂಡೇಶ್ವರ ದೇವಾಲಯಕ್ಕೆ ಸೇರಿದ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗದಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಾವು ನಿರ್ಧರಿಸಿದ್ದೇವೆ.
ಈಗಾಗಲೇ ಈ ಕುರಿತು ಮುಜರಾಯಿ ಇಲಾಖೆ, ಜಿಲ್ಲಾಧಿಕಾರಿ ಗಳು ಹಾಗೂ ಶ್ರೀಭಗಂಡೇಶ್ವರ- ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ದೂರು ನೀಡಲಾಗಿದೆ.
-ಬೊಳ್ಳಜಿರ ಬಿ. ಅಯ್ಯಪ್ಪ, ಕೊಡವ ಮಕ್ಕಡ ಕೂಟ