ಮಡಿಕೇರಿ, ಜ. 24: ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ಕರ್ತವ್ಯದ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಸಲಹೆಯಿತ್ತರು.ಕೊಡಗು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಮೈಸೂರು ಜೆಎಸ್ಎಸ್ ಆಸ್ಪತ್ರೆ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಪ್ರೆಸ್ಕ್ಲಬ್ ಹಾಗೂ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದ ಬಾಲಭವನದಲ್ಲಿ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬಸ್ಥರಿಗಾಗಿ ಆಯೋಜಿಸ ಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಸರ್ಕಾರದಿಂದಲೇ ಆರೋಗ್ಯಕ್ಕೆ ಸಂಬಂಧಿಸಿದಂತೆ ಸವಲತ್ತುಗಳಿವೆ. ಆದರೆ ಪತ್ರಕರ್ತರಿಗೆ ಯಾವದೇ ಸೌಲಭ್ಯಗಳಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಶಿಬಿರಗಳು ಸಹಕಾರಿ ಎಂದು ಸುಮನ್ ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಮನುಷ್ಯ ಸದಾ ಶಾಂತತೆಯಿಂದ ನಗುಮೊಗ ದೊಂದಿಗೆ ಬದುಕು ಸಾಗಿಸಬೇಕು. ಒತ್ತಡವನ್ನು ದೂರವಿಟ್ಟು ಶಿಸ್ತನ್ನು ಅಳವಡಿಸಿಕೊಂಡು ಉತ್ತಮ ಆಹಾರ ಪದ್ಧತಿಯೊಂದಿಗೆ ಬದುಕು ಸಾಗಿಸಿದರೆ ಆರೋಗ್ಯ ಸುರಕ್ಷಿತವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ದುಡಿಮೆ - ಸಂಪಾದನೆಯೊಂದಿಗೆ ಆರೋಗ್ಯ ರಕ್ಷಣೆಯು ಅತೀ ಮುಖ್ಯ ಎಂದರು. ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಹಾಗೂ ಶಿಶುಕಲ್ಯಾಣ ಸಂಸ್ಥೆ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಇವರುಗಳು ಮಾತನಾಡಿ, ಸದಾ ಒತ್ತಡದಲ್ಲೇ ಬದುಕು ಸಾಗಿಸುವ ಪತ್ರಕರ್ತರು ಆರೋಗ್ಯವನ್ನು ನಿರ್ಲಕ್ಷಿಸದೇ
(ಮೊದಲ ಪುಟದಿಂದ) ಕಾಪಾಡಿಕೊಳ್ಳಬೇಕೆಂದು ಹೇಳಿದರು.
ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೇಮ್ನಾಥ್, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ನಾಸಿರ್, ಜೆಎಸ್ಎಸ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಗುರುಪ್ರಸಾದ್, ಡಾ. ಆದರ್ಶ್ ಉಪಸ್ಥಿತರಿದ್ದರು. ಶಿವಕುಮಾರ ಸ್ವಾಮೀಜಿಯವರ ನಿಧನದ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡುವದರೊಂದಿಗೆ ಗೌರವ ಸಲ್ಲಿಸಲಾಯಿತು.
ಪತ್ರಕರ್ತ ಕಿಶೋರ್ ರೈ ನಿರೂಪಿಸಿ, ಕುಡೆಕಲ್ ಗಣೇಶ್ ಪ್ರಾರ್ಥಿಸಿದರು. ರಾಜು ರೈ ವಂದಿಸಿದರು.