ಮಡಿಕೇರಿ, ಜ. 22 : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಹಾಕತ್ತೂರಿನ ಸರ್ಕಾರಿ ಶಾಲೆಯಲ್ಲಿ ಒಂದು ವಾರದ ಶಿಬಿರಕ್ಕೆ ಚಾಲನೆ ನೀಡಲಾಯಿತು. ಹಾಕತ್ತೂರು ವಿಎಸ್ಎಸ್ಎನ್ ಅಧ್ಯಕ್ಷ ಸಾಬುತಿಮ್ಮಯ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎನ್ಎಸ್ಎಸ್ ಶಿಬಿರಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡು ಉತ್ತಮ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕೆಂದರು.
ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ತಿಲಕ್ ಪೊನ್ನಪ್ಪ ಮಾತನಾಡಿ ಇಂದಿನ ಯುವ ಪೀಳಿಗೆ ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಸಾಂಪ್ರದಾಯಿಕ ಆರೋಗ್ಯಕರ ಶಿಷ್ಟಾಚಾರದಿಂದ ದೂರ ಸರಿಯುತ್ತಿರುವ ಬೆಳವಣಿಗೆ ಕಳವಳಕಾರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಂಶುಪಾಲ ಡಾ. ಟಿ.ಡಿ.ತಿಮ್ಮಯ್ಯ ಮಾತನಾಡಿ, ಎನ್ಎಸ್ಎಸ್ನಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚುವದರೊಂದಿಗೆ ಸಂದಿಗ್ಧ ಪರಿಸ್ಥಿತಿಗಳನ್ನು ಜಯಿಸಬಹುದಾದ ಧೈರ್ಯ ಮೂಡಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಪ್ರದೀಪ್ ಭಂಡಾರಿ, ಪಿ.ಎ. ಗೀತಾಂಜಲಿ ಹಾಗೂ ಸಹ ಶಿಬಿರಾಧಿಕಾರಿಗಳಾದ ಪಿ.ಸಿ. ಮಂಜುನಾಥ ಗೌಡ, ಎನ್.ಟಿ.ಸಚಿನ್, ಎ.ಎನ್.ಮೋನಿಕಾ, ತೇಜಸ್ವಿನಿ ಬಿ.ಶೆಟ್ಟಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.