ಮಡಿಕೇರಿ ಜ.22 : ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಪರಿಹಾರ ಕಾರ್ಯಗಳ ಕಾಮಗಾರಿಗಳನ್ನು ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ನೀಡಿರುವ ಸರ್ಕಾರದ ಕ್ರಮ ಖಂಡನೀಯವೆಂದು ತಿಳಿಸಿರುವ ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ, ತಾ.28 ರಂದು ಜಿಲ್ಲೆಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಮಹಾಮಳೆಯಿಂದ ಅನಾಹುತ ಸಂಭವಿಸಿದಾಗ ತುರ್ತು ಕಾರ್ಯಗಳನ್ನು ಕೊಡಗಿನ ಗುತ್ತಿಗೆದಾರರೇ ಮಾಡಿ ಮುಗಿಸಿದ್ದಾರೆ. ಈ ಕಾಮಗಾರಿಗಳ ಹಣ ಇನ್ನು ಕೂಡ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿರುವಾಗಲೇ ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಉಳಿದ ಕಾಮಗಾರಿಗಳನ್ನು ವಹಿಸಿಕೊಡು ತ್ತಿರುವದು ಖಂಡನೀಯವೆಂದರು.

ಕೆ.ಆರ್.ನಗರದ ಗುತ್ತಿಗೆದಾರರಿಗೆ ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳನ್ನು ನೀಡುವಂತೆ ಒತ್ತಡ ಹೇರಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಕೃಪಾಕಟಾಕ್ಷವಿರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು.

ಸಚಿವರು ಹಾಗೂ ಶಾಸಕರುಗಳು ಕೊಡಗಿನ ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನಗಾಣಬೇಕು ಮತ್ತು ಈ ಹಿಂದೆ ಮುಗಿಸಿರುವ ಕಾಮಗಾರಿಗಳ ಬಾಕಿ ಹಣ ಅಂದಾಜು ರೂ.40 ಕೋಟಿಯನ್ನು ತಕ್ಷಣ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕೆಂದು ಚಂಗಪ್ಪ ಒತ್ತಾಯಿಸಿದರು.

ಹೊರ ಜಿಲ್ಲೆಯ ಗುತ್ತಿಗೆದಾರರಿಂದ ಕೊಡಗಿನ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ಕಾಮಗಾರಿ ನಡೆಯುವದು ಅಸಾಧ್ಯವಾಗಿದ್ದು, ಈ ಹಿಂದೆಯೂ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿರುವ ಉದಾಹರಣೆಗಳಿವೆ. ಜನಪ್ರತಿನಿಧಿಗಳು ಜಿಲ್ಲೆಯ ಗುತ್ತಿಗೆದಾರರ ಹಿತಕಾಯುವ ಕಾರ್ಯಕ್ಕೆ ಮುಂದಾಗಬೇಕೆಂದ ಅವರು, ಹೊರ ಜಿಲ್ಲೆಯ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡುವ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ತಾ.28 ರಂದು ಪ್ರತಿಭಟನೆ ನಡೆಸುವದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎಂ.ಅರುಣ್ ಕುಮಾರ್, ಖಜಾಂಚಿ ಕೆ.ಬಾಬು, ಸದಸ್ಯರಾದ ಟಿ.ಎಂ.ನಂಜಪ್ಪ ಹಾಗೂ ಸಿ.ಎಸ್.ರಾಜೀವ್ ಬೋಪಯ್ಯ ಉಪಸ್ಥಿತರಿದ್ದರು.