ಕುಶಾಲನಗರ, ಜ. 22: ಕುಶಾಲನಗರದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ಹಬ್ಬ ಆಚರಣಾ ಕಾರ್ಯಕ್ರಮಕ್ಕೆ ಈ ಬಾರಿಯೂ ಅಡ್ಡಿಯುಂಟಾಗಿದೆ. ಈ ಸಾಲಿನ ಗಣರಾಜ್ಯೋತ್ಸವ ಸಮಾರಂಭ ಆಚರಣೆಗೆ ಸ್ಥಳೀಯ ಕೆಲವು ಸಂಘಸಂಸ್ಥೆಗಳು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಭೆ ಸೇರಿದ ಸಂದರ್ಭ ಕೆಲವು ವ್ಯಕ್ತಿಗಳು ಆಚರಣೆಗೆ ಕಾನೂನಿನ ಅಡ್ಡಿ ಉಂಟಾಗಲಿದೆ ಎಂದು ಸಭೆಯಲ್ಲಿ ತಿಳಿಸಿದ ಹಿನ್ನಲೆ ಯಲ್ಲಿ ಸಭೆ ಯಾವದೇ ನಿರ್ಧಾರ ಕೈಗೊಳ್ಳದೆ ಬರಕಾಸ್ತುಗೊಳ್ಳ ಬೇಕಾಯಿತು.
ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಳ್ಳುತ್ತಿದ್ದ ರಾಷ್ಟ್ರೀಯ ಹಬ್ಬ ಆಚರಣೆ ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸಲು ಸ್ಥಳೀಯ ಸಂಘಸಂಸ್ಥೆ ಗಳ ಪ್ರಮುಖರಾದ ಕೆ.ಎಸ್.ನಾಗೇಶ್, ಎಂ. ಎನ್. ಚಂದ್ರಮೋಹನ್, ಕೆ. ಜಿ. ಮನು, ಹೆಚ್. ಎಸ್. ಉತ್ತಪ್ಪ, ರವಿ ಮತ್ತಿತರರು ಆಸಕ್ತಿ ವಹಿಸಿ ಸಭೆ ಕರೆದ ಸಂದರ್ಭ ಹಲವರು ಕಾರ್ಯಕ್ರಮ ನಡೆಸಲು ಪೂರಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ವಿವಿಧ ಶಾಲಾ ಕಾಲೇಜು ಗಳ ಮುಖ್ಯಸ್ಥರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ತಮ್ಮ ಸಲಹೆ ಸೂಚನೆ ನೀಡಿದರು. ಈ ಸಂದರ್ಭ ಸ್ಥಳೀಯ ಪ್ರೆಸ್ ಕ್ಲಬ್ ಅಧ್ಯಕ್ಷ ಎಚ್.ಎಂ.ರಘು, ಎಸ್ಡಿಎಂಸಿ ಅಧ್ಯಕ್ಷರಾದ ಕೆ. ಟಿ. ಶ್ರೀನಿವಾಸ್ ಅವರುಗಳು ರಾಷ್ಟ್ರೀಯ ಹಬ್ಬ ಆಚರಣೆ ಮಾಡಲು ಹೋಬಳಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ಹೆಸರು ಬಳಸು ವಂತಿಲ್ಲ. ಈ ಬಗ್ಗೆ ತಮ್ಮ ದೂರಿನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವದಾಗಿ ಸಭೆಗೆ ಮಾಹಿತಿ ಒದಗಿಸಿದರು. ಈ ಸಂದರ್ಭ ಸಭೆಯಲ್ಲಿ ಗೊಂದಲ ಮೂಡಿ ಯಾವದೇ ನಿರ್ಧಾರ ಕೈಗೊಳ್ಳಲು ಅಸಾಧ್ಯವಾಗಿ ಸಭೆ ಅಂತ್ಯಗೊಂಡಿತು.