ಮಡಿಕೇರಿ, ಜ. 21: ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ತರಬೇತಿ ಕೇಂದ್ರವು ನಗರದ ಬಾಲಕಿಯರ ಕ್ರೀಡಾ ವಿದ್ಯಾರ್ಥಿ ನಿಲಯದಲ್ಲಿ ಹಾಕಿ ಮತ್ತು ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ತಾ. 29 ಮತ್ತು 30 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾಯಿ ಹಾಕಿ ಟರ್ಫ್ ಮೈದಾನ, ರೇಸ್ ಕೋರ್ಸ್ ರಸ್ತೆ, ಇಲ್ಲಿ ಹಾಕಿ ಪಂದ್ಯಾವಳಿ ಹಾಗೂ ತಾ. 29 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ. ಈ ಸಂದರ್ಭ ಬಾಲಕಿಯರಿಗೆ ಹಾಕಿ ಮತ್ತು ಅಥ್ಲೆಟಿಕ್ಸ್ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಹಾಕಿ: 10 ರಿಂದ 18 ವರ್ಷ ಪ್ರಾಯದೊಳಗಿನ ಬಾಲಕಿಯರು ಜಿಲ್ಲಾ, ವಿಭಾಗ ಮಟ್ಟದಲ್ಲಿ ಪದಕ ವಿಜೇತರು, ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಅಥ್ಲೆಟಿಕ್ಸ್: 12 ರಿಂದ 18 ವರ್ಷ ಪ್ರಾಯದೊಳಗಿನ ಬಾಲಕಿಯರು ಜಿಲ್ಲಾ ಮಟ್ಟದ ಶಾಲಾ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್, ದಸರಾ ಕ್ರೀಡಾ ಕೂಟ ಹಾಗೂ ಸಿಬಿಎಸ್‍ಇ ಕ್ರೀಡಾ ಕೂಟದಲ್ಲಿ ಪದಕ ವಿಜೇತರು ಹಾಗೂ ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ದಾಖಲಾತಿಗಳು ಮೂಲ ಪ್ರತಿಯೊಂದಿಗೆ ಒಂದು ಸೆಟ್ ಪ್ರತಿ ತರಬೇಕು. ವೈದ್ಯಕೀಯ ಅರ್ಹತಾ ಪತ್ರ ವೈದ್ಯಾಧಿಕಾರಿಯವರಿಂದ, ಕ್ರೀಡಾ ಸಾಧನೆಯ ಸರ್ಟಿಫಿಕೇಟ್. (ಜಿಲ್ಲಾ, ವಿಭಾಗ, ರಾಜ್ಯ, ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಫರ್ಧೆಯಲ್ಲಿ ) ಜನ್ಮ ದಿನಾಂಕ ಪ್ರಮಾಣ ಪತ್ರ (ಜನನ ಮರಣ ನೋಂದಣಿ ಅಧಿಕಾರಿಗಳಿಂದ). ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ವಿಳಾಸ ದೃಡೀಕರಣಗೊಳಿಸಲು ಪಡಿತರ ಚೀಟಿ ಅಥವಾ ಚುನಾವಣೆ ಚೀಟಿ, ಅಥವಾ ಆಧಾರ್ ಕಾರ್ಡ್ ತರಬೇಕು ಎಂದು ಮಡಿಕೇರಿ ಸಾಯಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಬಿ.ಎಸ್. ರಮಾಮಣಿ ತಿಳಿಸಿದ್ದಾರೆ.