ಸಿದ್ದಾಪುರ, ಜ. 21: ಸಿದ್ದಾಪುರ-ಪಾಲಿಬೆಟ್ಟ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ರಾಶಿ ಹಾಕಿದ್ದು ರಸ್ತೆಯ ಬದಿ ಕಾಡುಗಳು ತುಂಬಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿದ್ದಾಪುರದ ವಕೀಲರು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತ ಕೆ.ಬಿ. ಹೇಮಚಂದ್ರರವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ಪಾಲಿಬೆಟ್ಟ-ಮೇಕೂರು-ಸಿದ್ದಾಪುರ ರಸ್ತೆಯ ಸಿದ್ದಾಪುರಕ್ಕೆ 2 ಕಿ.ಮೀ ದೂರವಿರುವ ಟಾಟಾ ಕಂಪೆನಿಗೆ ಸೇರಿದ ಎಮ್ಮೆಗುಂಡಿ ಕಾಫಿ ತೋಟದ ಮುಂಭಾಗ ಸಾಕಷ್ಟು ಸ್ಥಳವಿದ್ದರೂ ರಸ್ತೆಯ ಬದಿ ಅಕ್ರಮಿಸಿಕೊಂಡು ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧಿಕಾರಿಗಳು ರಸ್ತೆಯ ಬದಿಯಲ್ಲಿ ಸುಮಾರು 20 ಕ್ಕೂ ಅಧಿಕ ವಿದ್ಯುತ್ ಕಂಬಗಳನ್ನು ರಾಶಿ ಹಾಕಿದ್ದಾರೆ. ಇದಲ್ಲದೇ ಪಾಲಿಬೆಟ್ಟ-ಮೇಕೂರು-ಸಿದ್ದಾಪುರ ರಸ್ತೆಯ ಸಿದ್ದಾಪುರಕ್ಕೆ 3-4 ಕಿ.ಮೀ ದೂರವಿರುವ ಬಿ.ಬಿ.ಟಿ.ಸಿ ಕಂಪೆನಿಗೆ ಸೇರಿದ ಬೀಟಿಕಾಡು ತೋಟದ ಮುಂಭಾಗ ನೈಸರ್ಗಿಕವಾಗಿ ಬೆಳೆದಿರುವ ಕಾಡು ಗಿಡಗಳಿಂದ ವಾಹನ ಚಾಲಕರಿಗೆ ಸಮಸ್ಯೆಯಾಗಿದ ಈ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಏನಾದರೂ ಅನಾಹುತಗಳು ಸಂಭಂವಿಸಿದಲ್ಲಿ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಕೂಡಲೇ ಇಲಾಖಾಧಿಕಾರಿಗಳು ಸ್ಪಂದಿಸದಿದ್ದಲ್ಲಿ ಅವರ ವಿರುದ್ಧ 304ಎ ಹಾಗೂ ಇತರ ಸಂಬಂಧಿಸಿದ ವಿಧಿಗಳ ಅನ್ವಯ ಮೊಕ್ಕದ್ದಮೆ ಹೂಡುವದಾಗಿ ಹೇಮಚಂದ್ರ ಪುಕಾರಿನಲ್ಲಿ ತಿಳಿಸಿದ್ದಾರೆ.