ಸೋಮವಾರಪೇಟೆ, ಜ.21: ತಾಲೂಕು ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಇಲ್ಲಿನ ಕೊಡವ ಸಮಾಜದ ವೇದಿಕೆಯಲ್ಲಿ ಮೂಡಿಬಂದ ಜಾನಪದ ನೃತ್ಯಗಳು, ಜಾನಪದದ ವೈಭವವನ್ನು ಸಾರಿತು.

ನೆಲದ ಸಂಸ್ಕøತಿಯನ್ನು ಪರಿಚಯಿಸುವ ಸಾಹಿತ್ಯವನ್ನು ಹೊಂದಿದ್ದ ಜಾನಪದ ಗೀತೆಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಪ್ರೇಕ್ಷಕರ ಗಮನ ಸೆಳೆದರು. ಕನ್ನಡ, ಕೊಡವ, ತುಳುಭಾಷೆಗಳ ಜಾನಪದ ಸಂಸ್ಕøತಿಯನ್ನು ಬಿಂಬಿಸುವ ಗೀತೆಗಳಿಗೆ ಮಕ್ಕಳು ನರ್ತಿಸಿದರೆ, ಪ್ರೇಕ್ಷಕರು ಚಪ್ಪಾಳೆಯ ಮೂಲಕ ಪ್ರೋತ್ಸಾಹ ತುಂಬಿದರು.

ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್, ಶನಿವಾರಸಂತೆ ಮತ್ತು ಸೋಮವಾರಪೇಟೆ ಹೋಬಳಿ ಪರಿಷತ್‍ಗಳ ಸಹಯೋಗದೊಂದಿಗೆ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಲೂರು ಸಿದ್ದಾಪುರದ ಜಾನಕಿ ಕಾಳಪ್ಪ ಶಾಲಾ ತಂಡ ಪ್ರಥಮ ಸ್ಥಾನ ಪಡೆದರೆ, ಮಾಲಂಬಿ ಗಿರಿಜನ ಆಶ್ರಮ ಶಾಲೆ ದ್ವಿತೀಯ, ಸೋಮವಾರಪೇಟೆಯ ಓಎಲ್‍ವಿ ಶಾಲೆ ತೃತೀಯ ಸ್ಥಾನ ಪಡೆಯಿತು. ಕೂಡಿಗೆಯ ಜ್ಞಾನೋದಯ ಶಾಲೆ ಚತುರ್ಥ ಬಹುಮಾನಕ್ಕೆ ಭಾಜನವಾಯಿತು.

ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ವಿಶ್ವ ಮಾನವ ಕುವೆಂಪು ಶಾಲೆ ಪ್ರಥಮ, ಸೋಮವಾರಪೇಟೆಯ ಜಿಎಂಪಿ ದ್ವಿತೀಯ, ಗರಗಂದೂರಿನ ಸರ್ಕಾರಿ ಪ್ರಾಥಮಿಕ ಶಾಲೆ ತೃತೀಯ, ಆಲೂರು ಸಿದ್ದಾಪುರದ ಜಾನಕಿ ಕಾಳಪ್ಪ ಶಾಲೆ ಚತುರ್ಥ, ಓಎಲ್‍ವಿ ಶಾಲೆ ಐದನೇ ಸ್ಥಾನ ಪಡೆಯಿತು.

ಪ್ರೌಢಶಾಲೆ ವಿಭಾಗದಲ್ಲಿ ಸಂತ ಜೋಸೆಫರ ಶಾಲೆ ಪ್ರಥಮ, ಸಾಂದೀಪನಿ ಶಾಲೆ ದ್ವಿತೀಯ, ಸುಂಟಿಕೊಪ್ಪದ ನಾಡ ಪ್ರೌಢಶಾಲೆ ತೃತೀಯ, ಜ್ಞಾನವಿಕಾಸ ಶಾಲೆ ಚತುರ್ಥ, ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ ಐದನೇ ಸ್ಥಾನಕ್ಕೆ ಭಾಜನವಾಯಿತು.

ತೀರ್ಪುಗಾರರಾಗಿ ವಿದ್ಯಾನ್ ಬಿ.ಸಿ. ಶಂಕರಯ್ಯ, ರೋಟರಿ ಸಂಸ್ಥೆಯ ಶೋಭ ಯಶ್ವಂತ್, ಪಟ್ಟಣ ಪಂಚಾಯಿತಿ ಮಾಜೀ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರುಗಳು ಕಾರ್ಯನಿರ್ವಹಿಸಿದರು.

ವಿಜೇತ ತಂಡಗಳಿಗೆ ಪಾರಿತೋಷಕ, ಪ್ರಶಂಸನಾ ಪತ್ರಗಳನ್ನು ಶೃಂಗಾರ್ ಬ್ಯೂಟಿ ಪಾರ್ಲರ್‍ನ ಭಾಗ್ಯ, ಜೇಸೀ ಅಧ್ಯಕ್ಷ ಕೆ.ಎ. ಪ್ರಕಾಶ್, ಕೊಡವ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಚಂದ್ರಮೋಹನ್, ಹೋಬಳಿ ಘಟಕದ ಅಧ್ಯಕ್ಷರುಗಳಾದ ಮುರುಳೀಧರ್, ಸುಜಲಾದೇವಿ ಸೇರಿದಂತೆ ಇತರರು ವಿತರಿಸಿದರು. ಜಾನಪದ ನೃತ್ಯ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸೋಮವಾರಪೇಟೆ ಹೋಬಳಿ ಘಟಕದ ಅಧ್ಯಕ್ಷ ಮುರುಳೀಧರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ಅವರುಗಳು ಉಪಸ್ಥಿತರಿದ್ದರು. ಪರಿಷತ್‍ನ ಹೋಬಳಿ ಘಟಕದ ಪದಾಧಿಕಾರಿಗಳಾದ ಎಂ.ಎ. ರುಬೀನ, ದಿನೇಶ್ ಮಾಲಂಬಿ, ನ.ಲ. ವಿಜಯ, ಸುದರ್ಶನ್, ವಾಸಂತಿ, ಅನಿತಾ ಶುಭಕರ್, ಸುಮತಿ, ಅಶ್ವಿನಿ ಕೃಷ್ಣಕಾಂತ್, ಕೆ.ಪಿ. ದಿನೇಶ್, ದಿನೇಶ್, ಪುಟ್ಟಣ್ಣ ಆಚಾರ್ಯ,ರೇಣುಕಾ ವೆಂಕಟೇಶ್, ದಾಮೋಧರ್ ಸೇರಿದಂತೆ ಇತರರು ಕಾರ್ಯಕ್ರಮ ನಿರ್ವಹಿಸಿದರು.

ಮೂವರಿಗೆ ಸನ್ಮಾನ

ತಾಲೂಕು ಜಾನಪದ ಪರಿಷತ್ ಮತ್ತು ಶನಿವಾರಸಂತೆ ಹಾಗೂ ಸೋಮವಾರಪೇಟೆ ಹೋಬಳಿ ಜಾನಪದ ಪರಿಷತ್ ವತಿಯಿಂದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು. ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ, ಪ.ಪಂ. ಸದಸ್ಯೆ ನಳಿನಿ ಗಣೇಶ್, ವಿದ್ಯುತ್ ಇಲಾಖೆಯಲ್ಲಿ ಮಾರ್ಗದಾಳು ಆಗಿ ಕೆಲಸ ನಿರ್ವಹಿಸುತ್ತಿರುವ ಸದಾಶಿವ ಜಾದವ್ ಅವರುಗಳನ್ನು ಸನ್ಮಾನಿಸಲಾಯಿತು. ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಮಡಿಕೇರಿ ತಾಲೂಕು ಅಧ್ಯಕ್ಷ ಅನಿಲ್ ಹೆಚ್.ಟಿ., ಸೋಮವಾರಪೇಟೆ ಅಧ್ಯಕ್ಷ ಚಂದ್ರಮೋಹನ್, ಹೋಬಳಿ ಘಟಕದ ಎಸ್.ಎ. ಮುರುಳೀಧರ್, ಶನಿವಾರಸಂತೆಯ ಸುಜಲಾದೇವಿ, ರೋಟರಿ ಮಾಜೀ ಅಧ್ಯಕ್ಷ ವೀರರಾಜು, ಹಿರಿಯ ಸಾಹಿತಿ ಜಲಾ ಕಾಳಪ್ಪ ಅವರುಗಳು ಉಪಸ್ಥಿತರಿದ್ದರು.